ನವದೆಹಲಿ: ಜಮ್ಮುಕಾಶ್ಮೀರದ ಪಹಲ್ಗಾಮ್ ನಲ್ಲಿ ಪಾಕಿಸ್ತಾನ ಮೂಲದ ಉಗ್ರರು 26 ಪ್ರವಾಸಿಗರನ್ನು ಗುಂಡಿಟ್ಟು ಹತ್ಯೆಗೈದ ಘಟನೆಗೆ ಪ್ರತಿಕಾರ ತೀರಿಸಿಕೊಂಡಿರುವ ಭಾರತೀಯ ಸೇನೆ ‘ಆಪರೇಶನ್ ಸಿಂಧೂರ್’ ಕಾರ್ಯಾಚಾರಣೆ ನಡೆಸಿದ್ದು, ಪಾಕಿಸ್ತಾನದಲ್ಲಿ ಉಗ್ರರ ನೆಲೆಗಳನ್ನು ಧ್ವಂಸಗೊಳಿಸಿದೆ. 100ಕ್ಕೂ ಹೆಚ್ಚು ಭಯೋತ್ಪಾದಕರು ಸಾವನ್ನಪ್ಪಿದ್ದಾರೆ.
ಭಾರತ್ಯ ಸೇನೆ ತಡರಾತ್ರಿ ನಡೆಸಿದ ಆಪರೇಷನ್ ಸಿಂಧೂರ್ ಕಾರ್ಯಾಚರಣೆ ಬಗ್ಗೆ ಕರ್ನಲ್ ಸೋಫಿಯಾ ಖುರೇಶಿ ಹಾಗೂ ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.
ಪಾಕಿಸ್ತಾನದ 9 ಉಗ್ರರ ನೆಲೆಗಳನ್ನು ಗುರಿಯಾಗಿಸಿಕೊಂಡು ಆಪರೇಷನ್ ಸಿಂಧೂರ್ ಕಾರ್ಯಾಚರಣೆ ನಡೆಸಲಾಗಿತ್ತು. ತಡರಾತ್ರಿ 1:30ರ ಸುಮಾರಿಗೆ ನಡೆದ ಕಾರ್ಯಾಚರಣೆಯಲ್ಲಿ ಒಟ್ಟು 21 ಉಗ್ರರ ನೆಲೆಗಳನ್ನು ಭಾರತೀಯ ಸೇನೆ ನೆಲಸಮಗೊಳಿಸಿದೆ ಎಂದು ತಿಳಿಸಿದ್ದಾರೆ.
ಪಿಒಕೆಯಿಂದ ಕೇವಲ 30 ಕಿಮೀ ದೂರದಲ್ಲಿ ಸವಾಯಿನಾಲಾ ಮುಜಾಫರಾಬಾದ್ ನಲ್ಲಿ ಉಗ್ರರ ನೆಲೆಗಳು ಇದ್ದವು. ಇವುಗಳನ್ನು ಧ್ವಂಸಗೊಳಿಸಲಾಗಿದೆ. ಎಲ್ ಇಟಿ ಉಗ್ರರ ಅಡಗುದಾಣ, ಟ್ರೈನಿಂಗ್ ಕ್ಯಾಂಪ್ ಧ್ವಂಸಗೊಳಿಸಲಾಗಿದೆ. ಬರ್ನಾಲಾ ಕ್ಯಾಂಪ್, ಕೊಟ್ಲಿ, ಬಹವಾಲ್ಪುರ್, ಮುಜಾಫರಾಬಾದ್, ಗುಲ್ಪುರ್, ಭೀಂಬರ್, ಬಾಘ್, ಸಿಯಾಲ್ ಕೋಟ್, ಮುರಿದ್ಕೆ, ಚಕಾಮ್ರು ಮೇಲೆ ದಾಳಿ ನಡೆಸಿ ಉಗ್ರರ ಕ್ಯಾಂಪ್ ಗಳನ್ನು ಧ್ವಂಸಗೊಳಿಸಲಾಗಿದೆ. ಈ ಮೂಲಕ ಪಹಲ್ಗಾಮ್ ದಾಳಿಗೆ ಉಗ್ರರಿಗೆ ತಕ್ಕ ಉತ್ತರ ನೀಡಲಾಗಿದೆ ಎಂದು ತಿಳಿಸಿದ್ದಾರೆ.