ಬೆಂಗಳೂರು : ಹಂಪನಾ ಕನ್ನಡ ನೆಲದ ಶ್ರೇಷ್ಠ ಸಾಂಸ್ಕೃತಿಕ ವ್ಯಕ್ತಿತ್ವ. ಇವರು ರಚಿಸಿರುವ “ಚಾರು ವಸಂತ” ವಿಶೇಷ ಕೃತಿಯಾಗಿದೆ. ಇಲ್ಲಿಯವರೆಗೆ 16 ಭಾಷೆಗಳಿಗೆ ತರ್ಜುಮೆ ಆಗಿ, ಈಗ 17ನೇ ಭಾಷೆಯಾಗಿ ಪರ್ಷಿಯನ್ ಗೆ ಅನುವಾದಗೊಂಡಿರುವುದು ಕನ್ನಡದ ಹೆಮ್ಮೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಕಮಲಾ ಹಂಪನಾ ಸಾಹಿತ್ಯ ವೇದಿಕೆ ಮತ್ತು ಕರ್ನಾಟಕ ಚಿತ್ರಕಲಾ ಪರಿಷತ್ ಸಹಯೋಗದಲ್ಲಿ ಚಿತ್ರಕಲಾ ಪರಿಷತ್ ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ “ಹಂಪನಾ ಅವರ “ಚಾರು ವಸಂತ” ದೇಸೀಕಾವ್ಯದ ಪರ್ಷಿಯನ್ ಭಾಷಾ ಕೃತಿಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು.
ಕನ್ನಡ ವಿಶ್ವದ ಎಲ್ಲಾ ಭಾಷೆಗಳಿಗೆ ಅನುವಾದಗೊಂಡರೆ ಕನ್ನಡದ ಬೆಳವಣಿಗೆಗೆ ಕಾರಣವಾಗುತ್ತದೆ. ಕನ್ನಡದ ಮಹತ್ವದ ಕೃತಿಗಳು ಇಂಗ್ಲೀಷ್ ಸೇರಿ ವಿಶ್ವದ ಭಾಷೆಗಳಿಗೆ ಭಾಷಾಂತರಗೊಳ್ಳಲು ಸಂಪೂರ್ಣ ಸಹಕಾರ ನೀಡಲಾಗುವುದು ಎಂದರು.
ಹಂಪನಾ ಅವರ ಚಾರು ವಸಂತ ಕಾವ್ಯವು ನಾಟಕವಾಗಿ ಕೂಡ ಜನಮನ್ನಣೆ ಗಳಿಸಿದೆ. ಹಂಪನಾ ದಂಪತಿ ನನಗೆ ಬಹಳ ವರ್ಷಗಳಿಂದ ಆತ್ಮೀಯರಾಗಿದ್ದರು. ನಾನು ಸಾಹಿತಿ ಅಲ್ಲ. ಆದರೆ, ಸಾಹಿತ್ಯ ಮತ್ತು ಸಾಹಿತಿಗಳ ಒಡನಾಟ ನನಗಿದೆ. ಕನ್ನಡ ಕಾವಲು ಸಮಿತಿಯ ಮೊದಲ ಅಧ್ಯಕ್ಷನಾದ ಬಳಿಕ ನಾನು ಕೇಂದ್ರ ಸರ್ಕಾರಕ್ಕೆ ಬರೆಯುವ ಪತ್ರಗಳ ಹೊರತಾಗಿ ಬೇರೆ ಕಡೆ ಇಂಗ್ಲೀಷ್ ಬಳಸುವುದೇ ಇಲ್ಲ. ಹೀಗಾಗಿ ನನಗೆ ಇಂಗ್ಲಿಷ್ ಹೆಚ್ಚು ಬರದಂತಾಯಿತು.
ಮಲ ಹೊರುವ ಪದ್ಧತಿ ಬಗ್ಗೆ ಇರುವ ಕೃತಿ ಇದಾಗಿದೆ. ಜಾತಿ ವ್ಯವಸ್ಥೆ ರೂಪಿಸಿದ ಶಾಪ ಅಸ್ಪೃಶ್ಯತೆ. ಇದು ಅಳಿಯಬೇಕು. ಸಾಮಾಜಿಕ, ಆರ್ಥಿಕ ಶಕ್ತಿ ಎಲ್ಲರಿಗೂ ಸಿಕ್ಕಾಗ ಮಾತ್ರ ಚಲನೆ ಇಲ್ಲದ ಜಾತಿ ವ್ಯವಸ್ಥೆ ಅಳಿಯಲು ಸಾಧ್ಯ. ಚಾರು ವಸಂತ ಅದ್ಭುತವಾದ ಕಾವ್ಯ. ಕನ್ನಡ ಭಾಷೆಯ ಉಳಿವು, ಬೆಳವಣಿಗೆಗೆ ಇಂತಹ ಕೃತಿಗಳು ಬರಬೇಕು ಎಂದರು.