ಬೆಂಗಳೂರು: ಶುಕ್ರವಾರ ಚಿಕ್ಕಮಗಳೂರು, ಮೈಸೂರು, ಕೊಡಗು, ಹಾಸನ ಜಿಲ್ಲೆಗಳಲ್ಲಿ ಭಾರಿ ಮಳೆ ಆಗುವ ಸಾಧ್ಯತೆ ಇರುವುದರಿಂದ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಿಸಿದೆ.
ಮುಂದಿನ 24 ಗಂಟೆಗಳಲ್ಲಿ ನಾಲ್ಕು ಜಿಲ್ಲೆಗಳಲ್ಲಿ ಭಾರಿ ಮಳೆ ಆಗುವ ಸಾಧ್ಯತೆ ಇದೆ. ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಮಳೆಯಾಗುವ ಸಂಭವವಿದೆ. ಮಳೆಯೊಂದಿಗೆ ಗಂಟೆಗೆ 50 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸಲಿದ್ದು, ಗುಡುಗು ಮಿಂಚಿನ ಅಬ್ಬರದೊಂದಿಗೆ ಮಳೆಯಾಗಲಿದೆ ಎಂದು ಹೇಳಲಾಗಿದೆ.
ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಮೂರ್ನಾಲ್ಕು ದಿನ ಹಗುರ ಮಳೆಯಾಗಲಿದೆ. ಕಲಬುರಗಿ, ವಿಜಯಪುರ ಭಾಗದಲ್ಲಿ ಗಾಳಿ ಸಹಿತ ಹಗುರ ಮಳೆಯಾಗುವ ಸಾಧ್ಯತೆ ಇದ್ದು ಕರಾವಳಿ ಜಿಲ್ಲೆಗಳಲ್ಲಿಯೂ ಇದೇ ವಾತಾವರಣ ಇರುತ್ತದೆ.
ಗುರುವಾರ ಬೆಂಗಳೂರು, ಬಾಳೆಹೊನ್ನೂರು, ಗೌರಿಬಿದನೂರು, ಕೃಷ್ಣರಾಜಸಾಗರ, ಕೆಆರ್ ಪೇಟೆ ಸೇರಿದಂತೆ ಹಲವು ಕಡೆ ಮಳೆಯಾಗಿದೆ.