ಕಾಶ್ಮೀರದ ಪಹಲ್ಗಾಮ್ ನಲ್ಲಿ ಭಯೋತ್ಪಾದಕರ ದಾಳಿಗೆ ತಕ್ಕ ಪ್ರತ್ಯುತ್ತರ ನೀಡಲು ಭಾರತ ಮುಂದಾಗಿದ್ದು, ಈಗಾಗಲೇ ರಾಜತಾಂತ್ರಿಕ ಕ್ರಮದ ಮೂಲಕ ಪಾಕಿಸ್ತಾನಕ್ಕೆ ತಿರುಗೇಟು ನೀಡಿದೆ. ವೀಸಾ ರದ್ದು, ನದಿ ನೀರು ಸ್ಥಗಿತ ಸೇರಿ ಅನೇಕ ಕ್ರಮ ಕೈಗೊಳ್ಳಲಾಗಿದ್ದು, ಉಗ್ರರ ದಮನಕ್ಕೆ ದಾಳಿಯ ಮಾದರಿ, ಗುರಿ ಮತ್ತು ಸಮಯ ನಿರ್ಧರಿಸಲು ಸಶಸ್ತ್ರಪಡೆಗಳಿಗೆ ಸಂಪೂರ್ಣ ಕಾರ್ಯಾಚರಣೆಯ ಸ್ವಾತಂತ್ರ್ಯ ನೀಡಲಾಗಿದೆ. ಇದರ ಬೆನ್ನಲ್ಲೇ ಪಾಕಿಸ್ತಾನ ಬೆಚ್ಚಿಬಿದ್ದಿದ್ದು, ವಿಶ್ವಸಂಸ್ಥೆ ಮೊರೆ ಹೋಗಿದೆ.
ಭಾರತದ ಮುಂದಿನ ನಡೆಯ ಬಗ್ಗೆ ಪಾಕಿಸ್ತಾನ ಆತಂಕಗೊಂಡಿದ್ದು, ಭಾರತದ ದಾಳಿ ಭೀತಿಗೆ ಪಾಕಿಸ್ತಾನ ಸರ್ಕಾರ ತತ್ತರಿಸಿ ಹೋಗಿದೆ. ಮಧ್ಯಪ್ರವೇಶ ಮಾಡುವಂತೆ ವಿಶ್ವಸಂಸ್ಥೆಯ ಮೊರೆ ಹೋಗಿದೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಶರೀಫ್ ಫೋನ್ ಕರೆ ಮಾಡಿದ್ದಾರೆ. ಉಗ್ರರ ದಾಳಿಯ ಹಿಂದೆ ನಮ್ಮ ಕೈವಾಡ ಇಲ್ಲ ಎಂದು ಮಾಹಿತಿ ನೀಡಿದ್ದಾರೆ.
ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಪ್ರಧಾನ ಕಾರ್ಯದರ್ಶಿಗೆ ಶರೀಫ್ ಕರೆ ಮಾಡಿ ಮಾತನಾಡಿದ್ದು, ಭಾರತ ನಮ್ಮ ವಿರುದ್ಧ ಆಧಾರರಹಿತ ಸುಳ್ಳು ಆರೋಪ ಮಾಡುತ್ತಿದೆ ಎಂದು ದೂರಿದ್ದಾರೆ. ಉಗ್ರರ ದಾಳಿಯ ಬಗ್ಗೆ ತಟಸ್ಥ ತನಿಖೆ ನಡೆಸಲು ಎಂದು ಹೇಳಿದ್ದಾರೆ. ನಮ್ಮ ವಿರುದ್ಧದ ಆರೋಪಗಳನ್ನು ಹಿಂಪಡೆಯುವಂತೆ ಮನವಿ ಮಾಡಿದ್ದಾರೆ.
ಇನ್ನು ಯಾವುದೇ ಕ್ಷಣದಲ್ಲಿ ಭಾರತ ದಾಳಿ ಮಾಡುವ ಆತಂಕದಲ್ಲಿರುವ ಪಾಕಿಸ್ತಾನ ಗಡಿ ಭಾಗದಲ್ಲಿ ಅಲರ್ಟ್ ಆಗುವಂತೆ ಸೇನೆಗೆ ಸೂಚನೆ ನೀಡಿದೆ. ಯಾವುದೇ ಸಂದರ್ಭದಲ್ಲಿ ಭಾರತ ನಮ್ಮ ಮೇಲೆ ದಾಳಿ ಮಾಡಬಹುದು. ಮುಂದಿನ 24 ರಿಂದ 36 ಗಂಟೆಗಳ ಒಳಗೆ ಭಾರತ ದಾಳಿ ಮಾಡಬಹುದು. ಗಡಿ ಭಾಗದಲ್ಲಿ ಕಟ್ಟೆಚ್ಚರ ವಹಿಸುವಂತೆ ಸೇನೆಗೆ ಪಾಕಿಸ್ತಾನ ಮಾಹಿತಿ ಸಚಿವ ಸೂಚನೆ ನೀಡಿದ್ದಾರೆ.
ಈ ನಡುವೆ ಭಾರತದ ಗಡಿಯುದ್ಧಕ್ಕೂ ಪಾಕಿಸ್ತಾನದಿಂದ ಅಪ್ರಚೋದಿತ ಗುಂಡಿನ ದಾಳಿ ನಡೆಸಲಾಗಿದೆ. ಸುಂದರಬನಿ, ಅಕ್ನೂರು, ನೌಶೇರಾ ಪ್ರದೇಶದಲ್ಲಿ ಫೈರಿಂಗ್ ಮಾಡಲಾಗಿದೆ. ಭಾರತದ ವ್ಯಾಪ್ತಿಯ ಚೆನಾಬ್ ನದಿ ಭಾಗದ ಮೇಲೆಯೂ ಫೈರಿಂಗ್ ನಡೆಸಲಾಗಿದೆ. ಭಾರತದ ಸೇನಾ ಶಿಬಿರಗಳನ್ನು ಗುರಿಯಾಗಿಸಿಕೊಂಡು ಗುಂಡಿನ ದಾಳಿ ನಡೆಸಲಾಗಿದೆ. ತಡರಾತ್ರಿ 10 ರಿಂದ 12 ಸತ್ತು ಫೈರಿಂಗ್ ಮಾಡಲಾಗಿದ್ದು, ಪ್ರತಿ ದಾಳಿ ನಡೆಸಿ ಪಾಕಿಸ್ತಾನ ಸೇನೆಗೆ ಭಾರತೀಯ ಸೇನಾ ಪಡೆ ಬಿಎಸ್ಎಫ್ ತಕ್ಕ ಪ್ರತ್ಯುತ್ತರ ನೀಡಿದೆ.