ಬೆಂಗಳೂರು: ತಂದೆಯ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಭೂಗತ ಪಾತಕಿ ಬನ್ನಂಜೆ ರಾಜನಿಗೆ ಹೈಕೋರ್ಟ್ ಪೆರೋಲ್ ಮಂಜೂರು ಮಾಡಿದೆ.
ಬನ್ನಂಜೆ ರಾಜನಿಗೆ 15 ದಿನಗಳ ಷರತ್ತುಬದ್ಧ ಪೆರೋಲ್ ನೀಡಲಾಗಿದೆ. ಉದ್ಯಮಿಯ ಕೊಲೆ ಪ್ರಕರಣದಲ್ಲಿ ಬನ್ನಂಜೆ ರಾಜ ಜೀವಾವಧಿ ಶಿಕ್ಷೆಗೆ ಒಳಗಾಗಿದ್ದಾನೆ. ಬನ್ನಂಜೆ ರಾಜನ ತಂದೆ ಉಡುಪಿಯ ಸುಂದರ ಶೆಟ್ಟಿಗಾರ ಅವರು ನಿಧನರಾದ ಹಿನ್ನೆಲೆಯಲ್ಲಿ ಪೆರೋಲ್ ಕೋರಿ ಹೈಕೋರ್ಟ್ ಗೆ ಬನ್ನಂಜೆ ರಾಜನ ಪರ ವಕೀಲರು ಅರ್ಜಿ ಸಲ್ಲಿಸಿದ್ದರು.
ನಾಲ್ವರು ಪೊಲೀಸರ ಎಸ್ಕಾರ್ಟ್ ವಾಹನದೊಂದಿಗೆ ಪ್ರಯಾಣಿಸಬೇಕು. ಸಂಪೂರ್ಣ ವೆಚ್ಚವನ್ನು ಬನ್ನಂಜೆ ರಾಜನೇ ಭರಿಸಬೇಕು ಎಂದು ನ್ಯಾ. ಎಂ. ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಪೀಠ ಆದೇಶ ನೀಡಿದೆ.
ಕೋಕಾ ಮತ್ತು ಶಸ್ತ್ರಾಸ್ತ್ರ ಕಾಯ್ದೆಯಡಿ ದಾಖಲಾಗಿರುವ ಪ್ರಕರಣಗಳು ಸೇರಿದಂತೆ ಬನ್ನಂಜೆ ರಾಜನ ವಿರುದ್ಧ 23 ಪ್ರಕರಣಗಳು ಬಾಕಿ ಇವೆ. ಅನೇಕ ಪ್ರಕರಣಗಳಲ್ಲಿ ಬನ್ನಂಜೆ ರಾಜ ದೋಷಿ ಎಂದು ಸಾಬೀತಾಗಿದೆ. ಉದ್ಯಮಿಯ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾನೆ.