ವಿಜಯಪುರ: ಮೊಹಮ್ಮದ್ ಪೈಗಂಬರ್ ಬಗ್ಗೆ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪ ಕೇಳಿ ಬಂದಿದ್ದು, ಹೇಳಿಕೆ ಖಂಡಿಸಿ ಇಂದು ವಿಜಯಪುರದಲ್ಲಿ ಮುಸ್ಲಿಂ ಆಕ್ಷನ್ ಕಮಿಟಿ ನೇತೃತ್ವದಲ್ಲಿ ಪ್ರತಿಭಟನೆ ಕೈಗೊಳ್ಳಲಾಗಿದೆ.
ಪ್ರತಿಭಟನೆಯ ವೇಳೆ ಅಹಿತಕರ ಘಟನೆ ನಡೆದರೆ ಮುಸ್ಲಿಮರನ್ನೇ ಹೊಣೆಯಾಗಿಸಿ, ಮುಸ್ಲಿಂ ಮುಖಂಡರಿಂದ ಮುಚ್ಚಳಿಕೆ ಬಳಸಿಕೊಂಡು ಪ್ರತಿಭಟನೆಗೆ ಅವಕಾಶ ನೀಡಿ. ಹಿಂದೂಗಳ ಆಸ್ತಿಪಾಸ್ತಿ ನಷ್ಟವಾದರೆ ಹೋರಾಟ ಮಾಡಿದವರೇ ಭರಿಸಬೇಕು ಎಂದು ಗೃಹ ಸಚಿವರಿಗೆ ಪತ್ರ ಬರೆದು ಶಾಸಕ ಯತ್ನಾಳ್ ಮನವಿ ಮಾಡಿದ್ದಾರೆ.
ಯತ್ನಾಳ್ ಹೇಳಿಕೆ ಖಂಡಿಸಿ ಇಂದು ಮುಸ್ಲಿಂ ಸಂಘಟನೆಗಳಿಂದ ಪ್ರತಿಭಟನೆ ಕೈಗೊಳ್ಳಲಾಗಿದ್ದು, ವಿಜಯಪುರದಲ್ಲಿ ಮುಸ್ಲಿಮರ ಪ್ರತಿಭಟನೆ ಹಿನ್ನೆಲೆಯಲ್ಲಿ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ. ಸೂಕ್ಷ್ಮ, ಅತಿ ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚುವರಿ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿದೆ. ವಿಜಯಪುರ ಪೊಲೀಸ್ ವರಿಷ್ಠಾಧಿಕಾರಿ ನೇತೃತ್ವದಲ್ಲಿ 8 ಹೆಚ್ಚುವರಿ ಎಸ್ಪಿ, ಇಬ್ಬರು ಡಿವೈಎಸ್ಪಿ, 20 ಸಿಪಿಐ, 60 ಪಿಎಸ್ಐ, 500ಕ್ಕೂ ಹೆಚ್ಚು ಪೊಲೀಸರು, 8 ಡಿಎಆರ್ ತುಕಡಿ, 4 IRB ತುಕಡಿಗಳನ್ನು ನಿಯೋಜಿಸಲಾಗಿದೆ.