ಶ್ರೀನಗರ: ಪಹಲ್ಗಾಮ್ ನಲ್ಲಿ ಪ್ರವಾಸಿಗರ ಮೇಲೆ ನಡೆದ ದಾಳಿಗೆ ಜಾಗತಿಕ ಮಟ್ಟದಲ್ಲಿ ಆಕ್ರೋಶ ವ್ಯಕ್ತವಾಗಿದ್ದು, ಭಾರತದ ಪ್ರತಿಕಾರದ ಕ್ರಮಕ್ಕೆ ಬೆದರಿದ ಉಗ್ರ ಸಂಘಟನೆ ಟಿ.ಆರ್.ಎಫ್. ದಿಢೀರ್ ಉಲ್ಟಾ ಹೊಡೆದಿದೆ.
ಪಹಲ್ಗಾಮ್ ದಾಳಿಯ ಹೊಣೆ ಹೊತ್ತುಕೊಂಡಿದ್ದ ಲಷ್ಕರ್ ಎ ತೋಯ್ಬಾದ ಸಹ ಸಂಘಟನೆ ಟಿ.ಆರ್.ಎಫ್. ಉಲ್ಟಾ ಹೊಡೆದಿದ್ದು, ದಾಳಿಗೆ ನಾವು ಹೊಣೆಯಲ್ಲ ಎಂದು ತಿಳಿಸಿದೆ.
ಏಪ್ರಿಲ್ 22ರಂದು ಪಹಲ್ಗಾಮ್ ಬೈಸರನ್ ನಲ್ಲಿ ನಡೆದ ದಾಳಿಯಲ್ಲಿ 26 ಮಂದಿ ಮೃತಪಟ್ಟಿದ್ದರು. ಇದೀಗ ಉಲ್ಟಾ ಹೊಡೆದಿರುವ ಸಂಘಟನೆ ದಾಳಿ ನಡೆಸಿದ್ದು ನಾವಲ್ಲ. ನಮಗೂ ಕೃತ್ಯಕ್ಕೂ ಸಂಬಂಧವಿಲ್ಲ ಎಂದು ಹೇಳಿಕೊಂಡಿದೆ.
ನರಮೇಧ ನಡೆಸಿದ ದುಷ್ಟರನ್ನು ಸುಮ್ಮನೆ ಬಿಡುವುದಿಲ್ಲ. ಭೂಮಿಯ ಯಾವುದೇ ಬಿಲದಲ್ಲಿ ಅಡಗಿದ್ದರೂ ಹುಡುಕಿ ಹುಡುಕಿ ಹೊಡೆಯುತ್ತೇವೆ ಎಂದು ಪ್ರಧಾನಿ ಮೋದಿ ಎಚ್ಚರಿಕೆ ನೀಡಿದ್ದರು. ಭಾರತ ಸರ್ಕಾರ ಪಾಕಿಸ್ತಾನದ ವಿರುದ್ಧ ರಾಜತಾಂತ್ರಿಕ ಕ್ರಮ ಕೈಗೊಂಡು ತಿರುಗೇಟು ನೀಡಿದೆ. ಬಲವಾದ ರಾಜದಾಂತ್ರಿಕ ಕ್ರಮ, ಪ್ರತಿಕಾರದ ಪ್ರತಿಜ್ಞೆ, ರಕ್ಷಣಾ ಪಡೆಗಳ ಸಮರ ಸಿದ್ಧತೆಗೆ ಬೆದರಿದ ಟಿ.ಆರ್.ಎಫ್. ಸಂಘಟನೆ ದಾಳಿಯನ್ನು ನಾವು ನಡೆಸಿಲ್ಲ ಎಂದು ಹೇಳಿಕೊಂಡಿದೆ.