ಬೆಂಗಳೂರು: ಕಂದಾಯ ಗ್ರಾಮಗಳಾಗಿ ಪರಿವರ್ತನೆಗೊಂಡ ಹಾಡಿ, ಹಟ್ಟಿ ತಾಂಡಾಗಳಲ್ಲಿರುವ ನಿವಾಸಿಗಳಿಗೆ 94ಡಿ ಅಡಿ ಮೇ 20ರಂದು ಒಂದು ಲಕ್ಷ ಡಿಜಿಟಲ್ ಹಕ್ಕು ಪತ್ರ ವಿತರಿಸಲಾಗುವುದು.
ವಿವಿಧ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಸರ್ವೆ ಇಲಾಖೆ ಮುಖ್ಯಸ್ಥರೊಂದಿಗೆ ಶುಕ್ರವಾರ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಕಂದಾಯ ಸಚಿವ ಕೃಷ್ಣ ಬೈರೇಗೌಡ ನಂತರ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ಸರ್ಕಾರ ಎರಡು ವರ್ಷ ಪೂರ್ಣಗೊಳಿಸುತ್ತಿರುವ ಕಾರಣ ಅದೇ ದಿನ ಹಕ್ಕುಪತ್ರ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇನ್ನು ಮುಂದೆ ಕಾಗದ ಹಕ್ಕುಪತ್ರಗಳ ಬದಲಿಗೆ ಡಿಜಿಟಲ್ ಹಕ್ಕು ಪತ್ರ ವಿತರಿಸಲಾಗುವುದು. ವರ್ಷಾಂತ್ಯದ ವೇಳೆಗೆ ಒಟ್ಟು ಎರಡು ಲಕ್ಷ ಹಕ್ಕುಪತ್ರ ವಿತರಿಸುವ ಗುರಿ ಹೊಂದಲಾಗಿದೆ ಎಂದು ಹೇಳಿದ್ದಾರೆ.
ಅನೇಕ ಹಟ್ಟಿ, ತಾಂಡಾ, ಹಾಡಿಗಳನ್ನು ಕಂದಾಯ ಗ್ರಾಮಗಳಾಗಿ ಘೋಷಿಸಿದ್ದರೂ, ಅಲ್ಲಿನ ಜನರಿಗೆ ಸರ್ಕಾರದ ವಿವಿಧ ಸೌಲಭ್ಯ ಸಿಗುತ್ತಿಲ್ಲ. ಇದರಿಂದ ಅವರು ಸಂಕಷ್ಟಕ್ಕೆ ಒಳಗಾಗಿದ್ದು, ಶಾಶ್ವತ ಹಕ್ಕುಪತ್ರ ನೀಡುವ ಉದ್ದೇಶದಿಂದ 2016ರಲ್ಲಿ ಕಾನೂನಿಗೆ ತಿದ್ದುಪಡಿ ತರಲಾಗಿದೆ. ಕಳೆದ ಐದು ವರ್ಷಗಳಲ್ಲಿ ಒಂದು ಲಕ್ಷ ಹಕ್ಕುಪತ್ರ ಮಾತ್ರ ವಿತರಿಸಲಾಗಿದೆ. ನಮ್ಮ ಸರ್ಕಾರ ಒಂದು ವರ್ಷದಲ್ಲಿ 1.30 ಲಕ್ಷ ಹಕ್ಕುಪತ್ರ ವಿತರಿಸಿದೆ. ಡಿಜಿಟಲ್ ಹಕ್ಕುಪತ್ರ ನೀಡಲಿದ್ದು, ಸರ್ಕಾರದ ವತಿಯಿಂದಲೇ ಸ್ಥಳೀಯ ಸಂಸ್ಥೆಗಳಲ್ಲಿ ಆಸ್ತಿ ನೋಂದಣಿ ಮತ್ತು ಖಾತೆ ಮಾಡಿಸಿಕೊಡುವ ಯೋಜನೆ ಇದೆ ಎಂದು ಹೇಳಿದ್ದಾರೆ.