ನವದೆಹಲಿ: ಪಹಲ್ಗಾಮ್ ನಲ್ಲಿ ಪ್ರವಾಸಿಗರ ಮೇಲೆ ಉಗ್ರರ ದಾಳಿಗೆ ಪ್ರತೀಕಾರವಾಗಿ ಸಿಂಧೂ ನದಿ ಒಪ್ಪಂದಕ್ಕೆ ಭಾರತ ಸರ್ಕಾರ ಅಂತ್ಯ ಹಾಡಿದೆ. ಪಾಕಿಸ್ತಾನಕ್ಕೆ ಮೂರು ಹಂತಗಳಲ್ಲಿ ಪೆಟ್ಟು ನೀಡಲು ಭಾರತ ಸರ್ಕಾರ ನಿರ್ಧಾರ ಕೈಗೊಂಡಿದೆ.
ಪಾಕಿಸ್ತಾನಕ್ಕೆ ಬಿಸಿ ಮುಟ್ಟಿಸಲು ಭಾರತ ಮೂರು ಹಂತದ ಯೋಜನೆಯನ್ನು ಜಾರಿ ಮಾಡಲಿದೆ. ಮೊದಲ ಹಂತದಲ್ಲಿ ಪಾಕಿಸ್ತಾನಕ್ಕೆ ಹರಿಯುವ ನೀರು ನಿಲ್ಲಿಸುವುದು, ಪಾಕಿಸ್ತಾನಕ್ಕೆ ಸಿಂಧೂ, ಝೇಲಂ ಚೈನಾಬ್ ನದಿಯ ನೀರು ನಿಲ್ಲಿಸಲಾಗುವುದು. ಆದರೆ, ತಕ್ಷಣ ನೀರನ್ನು ಸಂಪೂರ್ಣವಾಗಿ ತಡೆಯಲು ಸಾಧ್ಯವಿಲ್ಲ. ಏಕಾಏಕಿ ನೀರು ನಿಲ್ಲಿಸಲು ಅಗತ್ಯ ಮೂಲಸೌಕರ್ಯವಿಲ್ಲ. ಜಲಾಶಯಗಳು, ಕಾಲುವೆಗಳು ಸಂಪೂರ್ಣವಾಗಿ ಅಭಿವೃದ್ಧಿಯಾಗಿಲ್ಲ. ಎರಡನೇ ಹಂತದಲ್ಲಿ ಜಲಾಶಯಗಳ ಸಾಮರ್ಥ್ಯ ಹೆಚ್ಚಿಸಲಾಗುವುದು. ಸಾಮರ್ಥ್ಯ ಹೆಚ್ಚಳಕ್ಕೆ ಚಿಂತನೆ ನಡೆಸಲಾಗಿದ್ದು, ಶೀಘ್ರವೇ ಕಾರ್ಯರೂಪಕ್ಕೆ ತರಲಾಗುವುದು. ಆಧುನಿಕ ತಂತ್ರಜ್ಞಾನದ ಮೂಲಕ ಸಾಮರ್ಥ್ಯ ವಿಸ್ತರಿಸಲು ಯೋಜನೆ ರೂಪಿಸಲಾಗಿದೆ.
ಮೂರನೇ ಹಂತದಲ್ಲಿ ಪಾಕಿಸ್ತಾನಕ್ಕೆ ನೀರಿನ ಡೇಟಾ ಹಂಚಿಕೆ ಮಾಡುವುದನ್ನು ನಿಲ್ಲಿಸಲಾಗುತ್ತದೆ. ಒಪ್ಪಂದ ರದ್ದಾಗಿರುವ ಪರಿಣಾಮ ಪಾಕಿಸ್ತಾನಕ್ಕೆ ಮಾಹಿತಿ ಹಂಚಿಕೆ ನಿಲ್ಲಿಸಲಾಗುವುದು. ನದಿಗಳ ಹರಿವಿನ ಮಾಹಿತಿ, ಪ್ರವಾಹ ಮಾಹಿತಿ, ಯೋಜನೆ ಮಾಹಿತಿಯನ್ನು ಪಾಕಿಸ್ತಾನಕ್ಕೆ ಹಂಚಿಕೆ ಮಾಡುವುದನ್ನು ನಿಲ್ಲಿಸಲಾಗುವುದು. ಇದರಿಂದ ಪಾಕಿಸ್ತಾನದ ಕೃಷಿ, ಜಲ ವ್ಯವಸ್ಥೆಯ ಮೇಲೆ ಪರಿಣಾಮ ಬೀರಲಿದೆ.