ದಾವಣಗೆರೆ: ಶಾಂತಿಸಾಗರ ಅತ್ಯಂತ ಸುಂದರವಾದ ಪ್ರದೇಶವಾಗಿದ್ದು, ಈ ಪ್ರದೇಶವನ್ನು ಒತ್ತುವರಿಯಾಗದಂತೆ ನೋಡಿಕೊಂಡು ನೀರು ಮಲಿನವಾಗದಂತೆ ತಡೆಗಟ್ಟಲು ವಿವರ ವರದಿ ನೀಡುವಂತೆ ಪರಿಸರ ಇಲಾಖೆ ಅಧಿಕಾರಿಗೆ ನ್ಯಾಯಮೂರ್ತಿ ಹಾಗೂ ಉಪಲೋಕಾಯುಕ್ತ ಬಿ.ವೀರಪ್ಪ ಸೂಚನೆ ನೀಡಿದರು.
ಅವರು ಶುಕ್ರವಾರ ಶಾಂತಿಸಾಗರ ಹಿನ್ನೀರು ಪ್ರದೇಶಕ್ಕೆ ಭೇಟಿ ನೀಡಿ ಕೆರೆ ಒತ್ತುವರಿ ಬಗ್ಗೆ ಪರಿಶೀಲನೆ ನಡೆಸಿದರು.
ಶಾಂತಿಸಾಗರ (ಸೂಳೆಕೆರೆ) 5447. 10 ಎಕರೆ ವಿಸ್ತೀರ್ಣ ಹೊಂದಿದ್ದು, ಇದರಲ್ಲಿ 219 ಎಕರೆ ಒತ್ತುವರಿಯಾಗಿದೆ ಎಂದು ಗುರುತಿಸಲಾಗಿದೆ. ಒತ್ತುವರಿಯಾದ ಜಾಗವನ್ನು ತೆರವು ಮಾಡಲು ಕ್ರಮ ಕೈಗೊಳ್ಳಬೇಕು. ಇಲ್ಲಿಂದ ಅನೇಕ ನಗರ, ಪಟ್ಟಣ ಹಾಗೂ ಅನೇಕ ಗ್ರಾಮಗಳಿಗೆ ಬಹುಗ್ರಾಮ ಯೋಜನೆಯ ಮೂಲಕ ಕುಡಿಯುವ ನೀರನ್ನು ಪೂರೈಕೆ ಮಾಡಲಾಗುತ್ತಿದೆ. ಕೆರೆಯ ಹೂಳೆತ್ತುವುದರಿಂದ ಹೆಚ್ಚಿನ ನೀರನ್ನು ಸಂಗ್ರಹಿಸಲು ಸಾಧ್ಯವಾಗಲಿದೆ. ರೈತರು ತಮ್ಮ ತೋಟ, ಜಮೀನುಗಳಿಗೆ ಮಣ್ಣನ್ನು ತೆಗೆದುಕೊಂಡು ಹೋಗುವುದರಿಂದ ರೈತರಿಗೂ ಲಾಭ ಮತ್ತು ಅಂತರ್ಜಲ ವೃದ್ಧಿಯಾಗಿ ನೀರಿನ ಸಂಗ್ರಹ ಹೆಚ್ಚಲಿದೆ ಎಂದರು.
ಈ ವೇಳೆ ಸ್ಥಳದಲ್ಲಿದ್ದ ಕೆಲವು ರೈತರು ಮೇಲಿನ ಮೂರು ಅಡಿಯೊಂದಿಗೆ ಇನ್ನೂ ಆಳದವರೆಗೆ ಮಣ್ಣು ತೆಗೆಯುತ್ತಾರೆ ಎಂದಾಗ ರೈತರೊಂದಿಗೆ ಸಭೆ ನಡೆಸಿ ಹೂಳೆತ್ತಲು ಮುಂದಾಗಲು ತಿಳಿಸಿ, ರೈತರೂ ಇದಕ್ಕೆ ಸಹಕಾರ ನೀಡಬೇಕೆಂದರು.
ಕೋಲಾರದ ಭಾಗದಲ್ಲಿ 1000 ಅಡಿಗಿಂತ ಆಳದವರೆಗೂ ನೀರು ಸಿಗುವುದೇ ಕಷ್ಟವಾಗಿದೆ. ಶಾಂತಿಸಾಗರ ಬಹಳ ಸುಂದರವಾದ ಪ್ರದೇಶವಾಗಿದ್ದು, ಇದನ್ನು ಸಂರಕ್ಷಣೆ ಮಾಡುವುದರಿಂದ ಭವಿಷ್ಯಕ್ಕೆ ಅನುಕೂಲ ಮತ್ತು ಪ್ರಾಣಿ, ಪಕ್ಷಿ ಸೇರಿದಂತೆ ಸಕಲ ಜೀವರಾಶಿಗಳಿಗೂ ಅನುಕೂಲವಾಗಲಿದೆ. ಈ ಸಂಪತ್ತನ್ನು ಒಮ್ಮೆ ಕಳೆದುಕೊಂಡರೆ, ಭವಿಷ್ಯದ ಪೀಳಿಗೆ ಸಾಕಷ್ಟು ಸಂಕಷ್ಟಗಳನ್ನು ಎದುರಿಸಬೇಕಾಗುತ್ತದೆ ಎಂದರು.
ಶಾಂತಿಸಾಗರ ಪ್ರವಾಸಿ ತಾಣ:
ಶಾಂತಿ ಸಾಗರವನ್ನು ಪ್ರವಾಸಿ ತಾಣವಾಗಿಸಲು ಸಾಕಷ್ಟು ಅವಕಾಶಗಳಿವೆ. ಕೆರೆ ಸುತ್ತಮುತ್ತಲು ಅರಣ್ಯ ಸಸಿಗಳನ್ನು ಬೆಳೆಸಬೇಕು. ಇಲ್ಲಿ ಹೋಂಸ್ಟೇಗಳಿಗೆ ಅವಕಾಶ ಮಾಡಿಕೊಡಬಾರದು. ಜಲಸಾಹಸ ಕ್ರೀಡೆಗಳಿಗೆ ಇನ್ನೂ ಹೆಚ್ಚಿನ ಆದ್ಯತೆ ನೀಡಿ ನೀರು ಮಲಿನವಾಗದಂತೆ ಪ್ಲಾಸ್ಟಿಕ್ ನೀರಿಗೆ ಹಾಕಿಸಬೇಡಿ ಮತ್ತು ಪ್ರವಾಸಿಗರು ತಂದ ಆಹಾರವನ್ನು ಕೆರೆಗೆ ಹಾಕದಂತೆ ನೋಡಿಕೊಳ್ಳಲು ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕೆರೆ ಮಾಲಿನ್ಯ ತಡೆಗೆ ಸಮಗ್ರ ವರದಿ ನೀಡಲು ಸೂಚನೆ:
ಶಾಂತಿ ಸಾಗರ ವ್ಯಾಪ್ತಿಯಲ್ಲಿ 10 ಪಂಚಾಯಿತಿಗಳು ಬರುತ್ತವೆ. ಇಲ್ಲಿನ ಬಳಕೆ ನೀರನ್ನು ಮತ್ತು ಮಲ, ಮೂತ್ರದ ನೀರು ಶಾಂತಿ ಸಾಗರಕ್ಕೆ ಸೇರದಂತೆ ನೋಡಿಕೊಳ್ಳಬೇಕು. ಈ ಬಗ್ಗೆ ಪರಿಶೀಲಿಸಿ ಸಮಗ್ರವಾದ ವರದಿಯನ್ನು ಪರಿಸರ ಇಲಾಖೆ ಅಧಿಕಾರಿಗಳು ನೀಡಬೇಕು. ಅಧಿಕಾರಿಗಳು ನೀಡಿದ ವರದಿಯನ್ನು ಲೋಕಾಯುಕ್ತ ಅಧಿಕಾರಿಗಳಿಂದ ಪರಿಶೀಲನೆ ನಡೆಸಲಾಗುತ್ತದೆ ಎಂದು ತಿಳಿಸಿದರು.
ಲೋಕಾಯುಕ್ತ ಅಪರ ನಿಬಂಧಕ ಕೆ.ಎಂ.ರಾಜಶೇಖರ್, ಉಪನಿಬಂಧಕ ಅರವಿಂದ್ ಎನ್.ವಿ, ಮಿಲನ, ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾವೀರ ಮ.ಕರಣ್ಣನವರ, ಜಿಲ್ಲಾಧಿಕಾರಿ ಸುರೇಶ್ ಬಿ.ಇಟ್ನಾಳ್, ಪೊಲೀಸ್ ಅಧೀಕ್ಷಕರಾದ ಉಮಾ ಪ್ರಶಾಂತ್ ಹಾಗೂ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.