ರಾಯಚೂರು: ಸಾರ್ವಜನಿಕರ ವಿರೋಧದ ನಡುವೆಯೂ ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ಕಾಕರಗಲ್ ಸಮೀಪ ರಾಜ್ಯ ರಸ್ತೆ ಅಭಿವೃದ್ಧಿ ನಿಗಮ ನಿರ್ಮಿಸಿದ ಟೋಲ್ ಮೇಲೆ ಬುಧವಾರ ತಡರಾತ್ರಿ ಜೆಡಿಎಸ್ ಕಾರ್ಯಕರ್ತರು, ಗ್ರಾಮಸ್ಥರು, ದಿಢೀರ್ ದಾಳಿ ಮಾಡಿ ಹಲವು ವಸ್ತುಗಳು, ಪರಿಕರಗಳನ್ನು ಧ್ವಂಸ ಮಾಡಿದ್ದಾರೆ.
ಬೈಕ್ ಮತ್ತು ಕಾರ್ ಗಳಲ್ಲಿ ಬಂದ ನೂರಾರು ಜನ ಟೋಲ್ ನಿರ್ಮಾಣ ಖಂಡಿಸಿ ಕೆಲವು ಕಾಲ ಪ್ರತಿಭಟನೆ ನಡೆಸಿದ್ದಾರೆ. ಇದೇ ವೇಳೆ ಶಾಸಕರಾದ ಕರೆಮ್ಮ ಜಿ. ನಾಯಕ ಸ್ಥಳಕ್ಕೆ ಭೇಟಿ ನೀಡಿದ್ದರು. ಶಾಸಕರನ್ನು ಕಂಡು ಪ್ರಚೋದಿತರಾದ ಪ್ರತಿಭಟನಾಕಾರರು ಬ್ಯಾರಿಕೇಡ್ ಗಳನ್ನು ಮುರಿದು ಸಿಸಿ ಟಿವಿ ಕ್ಯಾಮರಾಗಳನ್ನು ಕಿತ್ತೆಸೆದು ಕಂಪ್ಯೂಟರ್ ಗಳನ್ನು ಹಾನಿಗೊಳಿಸಿದ್ದಾರೆ. ಕಿಟಕಿ ಗಾಜು ಒಡೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಗಬ್ಬೂರು ಠಾಣೆ ಪೊಲೀಸರು ಹಲವರನ್ನು ವಶಕ್ಕೆ ಪಡೆದು ಪರಿಸ್ಥಿತಿ ತಿಳಿಗೊಳಿಸಿದ್ದಾರೆ.
ಮೇಲ್ವಿಚಾರಣೆಯಲ್ಲಿದ್ದ ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ನವೀನ್ ಕುಮಾರ್ ಅವರು ಗಬ್ಬೂರು ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ. ಶಾಸಕಿಯ ಸಹೋದರ ತಿಮ್ಮರೆಡ್ಡಿ ನಾಯಕ, ಪುತ್ರ ಸಂತೋಷ ನಾಯಕ ಕಾರ್ಯಕರ್ತ ಸಲೀಂ ಕಾಕರಗಲ್ ಸೇರಿದಂತೆ 12ಕ್ಕೂ ಹೆಚ್ಚು ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಾಗಿದೆ.