ಬೆಂಗಳೂರು: ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿ ಕಲ್ಪಿಸಲು ಮೇ 5ರಿಂದ 17ರ ವರೆಗೆ ರಾಜ್ಯಾದ್ಯಂತ ಪರಿಶಿಷ್ಟ ಜಾತಿ, ಉಪಜಾತಿ ಸಮಗ್ರ ಸಮೀಕ್ಷೆ- 2025 ನಡೆಯಲಿದೆ.
ನಿವೃತ್ತ ನ್ಯಾಯಮೂರ್ತಿ ಹೆಚ್.ಎನ್. ನಾಗಮೋಹನದಾಸ್ ನೇತೃತ್ವದಲ್ಲಿ ಸರ್ಕಾರ ಒಳ ಮೀಸಲಾತಿಗಾಗಿ ರಚಿಸಿದ ಆಯೋಗದ ಶಿಫಾರಸಿನ ಮೇರೆಗೆ ಈ ಸಮೀಕ್ಷೆ ಕೈಗೊಳ್ಳಲಾಗಿದೆ. ಸಮೀಕ್ಷೆಗಾಗಿ ರಚಿಸಲಾದ ರಾಜ್ಯಮಟ್ಟದ ಸಮನ್ವಯ ಸಮಿತಿ ಅಧ್ಯಕ್ಷರು ಮತ್ತು ಅಭಿವೃದ್ಧಿ ಆಯುಕ್ತರಾದ ಉಮಾ ಮಹಾದೇವನ್ ಅಧ್ಯಕ್ಷತೆಯಲ್ಲಿ ಆಯೋಗವು ಜಿಲ್ಲಾಧಿಕಾರಿಗಳು, ಜಿಪಂ ಸಿಇಒಗಳು, ಜಿಲ್ಲಾ ಪೊಲೀಸ್ ಅಧೀಕ್ಷಕರ ಜೊತೆಗೆ ವಿಡಿಯೋ ಸಂವಾದ ನಡೆಸಿದೆ.
ಗಣತಿದಾರರಿಗೆ ಏಪ್ರಿಲ್ 28ರಂದು ಜಿಲ್ಲಾ ಮಟ್ಟದಲ್ಲಿ, ಏ. 29 ಮತ್ತು 30 ರಂದು ತಾಲೂಕು ಮಟ್ಟದಲ್ಲಿ ತರಬೇತಿ ನಡೆಸಲು ತೀರ್ಮಾನ ಕೈಗೊಳ್ಳಲಾಗಿದೆ. ಮೂರು ಹಂತಗಳಲ್ಲಿ ಮೊಬೈಲ್ ಆಪ್ ಬಳಸಿ ಸಮೀಕ್ಷೆ ನಡೆಸಲಾಗುವುದು. ಮೊದಲ ಹಂತದಲ್ಲಿ ಗಣತಿದಾರರು ಮನೆಮನೆಗೆ ತೆರಳಿ ದತ್ತಾಂಶ ಸಂಗ್ರಹಿಸಲಿದ್ದಾರೆ. ಎರಡನೇ ಹಂತದಲ್ಲಿ ಮೇ 19ರಿಂದ 21ರ ವರೆಗೆ ಮತಗಟ್ಟೆ ಪ್ರದೇಶವಾರು ವಿಶೇಷ ಶಿಬಿರ ಏರ್ಪಡಿಸಿ ಮಾಹಿತಿ ನೀಡಲು ಅವಕಾಶ ಕಲ್ಪಿಸಲಾಗುವುದು. ಸಮೀಕ್ಷೆಯ 2 ಹಂತಗಳಲ್ಲಿ ಭಾಗಿಯಾಗಲು ಸಾಧ್ಯವಾಗದವರಿಗೆ ಆನ್ಲೈನ್ ಮೂಲಕ ಸ್ವಯಂ ಘೋಷಣೆಗೆ ಮೇ 19ರಿಂದ 23ರ ವರೆಗೆ ಅವಕಾಶ ಸಿಗಲಿದೆ. ಸ್ವಯಂ ಘೋಷಣೆಗೆ ಆಧಾರ್ ನಂಬರ್ ಮತ್ತು ಜಾತಿ ಪ್ರಮಾಣ ಪತ್ರದ ಆರ್.ಡಿ. ಸಂಖ್ಯೆ ಕಡ್ಡಾಯವಾಗಿದೆ.
ಸಮೀಕ್ಷೆಯಲ್ಲಿ ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ ಜಾತಿಗಳ ಮಾಹಿತಿಯನ್ನು ಕಡ್ಡಾಯವಾಗಿ ನಮೂದಿಸಬೇಕು. ಆದಿ ಕರ್ನಾಟಕ, ಆದಿ ದ್ರಾವಿಡ, ಆದಿ ಆಂಧ್ರ ಎಂದು ನಮೂದಿಸಿದ್ದರೆ ಅಂತಹವರು ತಮ್ಮ ಉಪಜಾತಿಯನ್ನು ಕಡ್ಡಾಯವಾಗಿ ನಮೂದಿಸಬೇಕು. ಸಮೀಕ್ಷೆಯಲ್ಲಿ ಉಪಜಾತಿಗಳ ಜನಸಂಖ್ಯೆ, ಕುಟುಂಬಗಳ ಸಂಖ್ಯೆ, ಪಡೆದ ಶಿಕ್ಷಣ, ವೃತ್ತಿ, ವಾಸಿಸುವ ಪ್ರದೇಶ, ಸೌಲಭ್ಯಗಳು, ಆರ್ಥಿಕ ಪರಿಸ್ಥಿತಿಗೆ ಸಂಬಂಧಿಸಿದ ಮಾಹಿತಿಗಳು, ಸರ್ಕಾರಿ ಉದ್ಯೋಗ, ಖಾಸಗಿ ಉದ್ಯೋಗ, ಭೂಮಿಯ ಒಡೆತನ, ಆದಾಯ, ಸರ್ಕಾರದಿಂದ ಪಡೆದ ಸೌಲಭ್ಯ, ರಾಜಕೀಯ ಪ್ರಾತಿನಿಧ್ಯ ಮತ್ತಿತರ ಮಾಹಿತಿಗಳನ್ನು ಕೂಡ ನಮೂದಿಸಲಾಗುವುದು.