2024-25 ನೇ ಸಾಲಿನ ಹಿಂಗಾರು ಋತುವಿನಲ್ಲಿ ಬೆಳೆದ ಜೋಳವನ್ನು ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ನೇರವಾಗಿ ಖರೀದಿಸಲಾಗುವುದು ಎಂದು ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕರಾದ ಸಕೀನ ಅವರು ತಿಳಿಸಿದ್ದಾರೆ.
ಈ ಕುರಿತು ಬಳ್ಳಾರಿ ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿ ತೀರ್ಮಾನಿಸಿದ್ದು, 2024-25 ನೇ ಸಾಲಿನ ಬೆಂಬಲ ಬೆಲೆ ಯೋಜನೆ ಕಾರ್ಯಾಚರಣೆಯನ್ನು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳಿ ನಿಯಮಿತ, ಬಳ್ಳಾರಿ ನಿರ್ವಹಿಸಲಿದೆ.
ಸರ್ಕಾರದ ಆದೇಶದಂತೆ ಬೆಂಬಲ ಬೆಲೆ ಯೋಜನೆಯಡಿ ಜೋಳವನ್ನು ಮಾರಾಟ ಮಾಡಲು ರೈತರು ಮೊದಲು ಕೃಷಿ ಇಲಾಖೆಯಲ್ಲಿ ಪ್ರೂಟ್ಸ್ ತಂತ್ರಾAಶದಲ್ಲಿ ನೋಂದಣಿ ಮಾಡಿಕೊಳ್ಳಬೇಕು. ನಂತರ ಆಯಾ ತಾಲ್ಲೂಕುಗಳ ಕೃಷಿ ಉತ್ಪನ್ನ ಮಾರುಕಟ್ಟೆ, ತಾಲೂಕು ಕೃಷಿ ಉತ್ಪನ್ನ ಸಹಕಾರ ಮಾರಾಟ ಸಂಘ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ತಾಲೂಕು ಕೇಂದ್ರ ಕಚೇರಿಗಳಲ್ಲಿ ತೆರೆಯಲಾಗುವ ಖರೀದಿ ಕೇಂದ್ರಗಳಲ್ಲಿ ಜೋಳ ಮಾರಾಟ ಮಾಡಲು ನೋಂದಾಯಿಸಿಕೊಳ್ಳಬೇಕು ಎಂದು ಅವರು ತಿಳಿಸಿದ್ದಾರೆ.
ಸರ್ಕಾರ ಘೋಷಿಸಿರುವ ಬೆಂಬಲ ಬೆಲೆ:
ಬಿಳಿಜೋಳ-ಹೈಬ್ರಿಡ್: ರೂ.3,371 ಮತ್ತು ಬಿಳಿಜೋಳ-ಮಾಲ್ದಂಡಿ: ರೂ.3,421.
ನೋಂದಣಿ ಮತ್ತು ಖರೀದಿ ಅವಧಿ:
ನೋಂದಣಿ ಈಗಾಗಲೇ ಪ್ರಾರಂಭಗೊAಡಿದ್ದು, ಮೇ 31 ರ ವರೆಗೆ ಖರೀದಿಸಲಾಗುವುದು.
ಖರೀದಿ ಕೇಂದ್ರಗಳ ವಿವರ:
ಬಳ್ಳಾರಿ ತಾಲ್ಲೂಕಿನ ಎಪಿಎಂಸಿ ಆವರಣ ಮತ್ತು ರೂಪನಗುಡಿ. ಸಿರುಗುಪ್ಪ ತಾಲ್ಲೂಕಿನ ಸಿರುಗುಪ್ಪ ಪಟ್ಟಣ, ಕರೂರು, ತಾಳೂರು ಮತ್ತು ಹಚ್ಚೋಳ್ಳಿ. ಕಂಪ್ಲಿ ತಾಲ್ಲೂಕಿನ ಕಂಪ್ಲಿ ಪಟ್ಟಣ, ಎಮ್ಮಿಗನೂರು. ಕುರುಗೋಡು ಮತ್ತು ಸಂಡೂರು.
ರೈತರ ನೋಂದಣಿ:
ರೈತರ ನೋಂದಣಿಯನ್ನು ತಾಲೂಕು ಮಟ್ಟದ /ಹೋಬಳಿ ಮಟ್ಟದಲ್ಲಿ ಖರೀದಿ ಕೇಂದ್ರಗಳಲ್ಲಿ ಆನ್ಲೈನ್ ಮುಖಾಂತರ ಮಾಡಲಾಗುವುದು. ಖರೀದಿ ಕೇಂದ್ರಕ್ಕೆ ರೈತರು ಕೃಷಿ ಇಲಾಖೆಯಿಂದ ಪಡೆದಿರುವ ಅವರ ಫ್ರೂಟ್ಸ್ ಐ.ಡಿ (ರೈತರ ನೊಂದಣಿ ಮತ್ತು ಏಕೀಕೃತ ಫಲಾನುಭವಿ ಮಾಹಿತಿ ವ್ಯವಸ್ಥೆ) ಮತ್ತು ಆಧಾರ್ನೊಂದಿಗೆ ನೋಂದಣಿ ಕೇಂದ್ರಕ್ಕೆ ಬರಬೇಕು.
ಬೆಂಬಲ ಬೆಲೆಗಾಗಿ ರೈತರನ್ನು ಪ್ರತ್ಯೇಕವಾಗಿ ನೊಂದಾಯಿಸದೆ ಕೇವಲ ಅವರ ಫ್ರೂಟ್ಸ್ ಐ.ಡಿ.ಯ ಮೂಲಕ ಖರೀದಿಗೆ ನೋಂದಾಯಿಸಲಾಗುವುದು. ರೈತರ ಫ್ರೂಟ್ಸ್ ಐ.ಡಿಯನ್ನು ರೈತರಿಂದಲೇ ಪ್ರಸ್ತುತ ಸಾಲಿನ ಫ್ರೂಟ್ಸ್ ಐ.ಡಿ ಪಡೆಯುವುದು ಕಡ್ಡಾಯ. ರೈತರ ಬಳಿ ಫ್ರೂಟ್ಸ್ ಐ.ಡಿ ಇಲ್ಲದಿದ್ದಲ್ಲಿ ಅಥವಾ ಅವರ ಫ್ರೂಟ್ಸ್ ಐ.ಡಿ ಮಾಹಿತಿ ಪರಿಷ್ಕರಿಸಲು ಕೃಷಿ ಇಲಾಖೆಯನ್ನು ಸಂಪರ್ಕಿಸಿ ಸರಿಪಡಿಸಿಕೊಳ್ಳಬೇಕು.
ಪ್ರತಿಯೊಬ್ಬ ರೈತರ ಫ್ರೂಟ್ಸ್ ಐ.ಡಿ ನಮೂದಿಸಿದ ನಂತರ ಫ್ರೂಟ್ಸ್ ದತ್ತಾಂಶದಿAದ ರೈತರ ಅಗತ್ಯ ಮಾಹಿತಿ ಲಭ್ಯವಾಗಲಿದೆ. ಮಾಹಿತಿಯಲ್ಲಿ ರೈತರ ಹೆಸರು, ವಿಳಾಸ, ಜಾತಿ, ವಯಸ್ಸು, ಮೊಬೈಲ್ ಸಂಖ್ಯೆ, ಜಮೀನು ಮತ್ತು ಬೆಳೆದಿರುವ ಬೆಳೆಯ ವಿವರಗಳು ಹಾಗೂ ರೈತರ ಬ್ಯಾಂಕ್ ಖಾತೆಯ ವಿವರಗಳು ಲಭ್ಯವಿರುತ್ತವೆ. ಹಾಗಾಗಿ ಪ್ರತ್ಯೇಕವಾಗಿ ಬೇರಾವುದೇ ದಾಖಲೆ ನೀಡುವ ಅವಶ್ಯಕತೆ ಇರುವುದಿಲ್ಲ.
ಫ್ರೂಟ್ಸ್ ದತ್ತಾಂಶದನ್ವಯ ರೈತರ ಬೆಳೆ ಸಮೀಕ್ಷೆ ವಿವರದಂತೆ ಬೆಳೆ ವಿಸ್ತೀರ್ಣಕ್ಕನುಗುಣವಾಗಿ ಬೆಂಬಲ ಬೆಲೆ ಯೋಜನೆಯಡಿ ಖರೀದಿಸಬಹುದಾದ ಗರಿಷ್ಠ ಪ್ರಮಾಣವನ್ನು ತೋರಿಸಲಾಗುವುದು. ಖರೀದಿ ಕೇಂದ್ರಗಳಲ್ಲಿ ನೋದಣಿ ಮಾಡಿದಾಗ ಅದೇ ಖರೀದಿ ಕೇಂದ್ರದಲ್ಲೇ ಖರೀದಿ ಮಾಡಿಕೊಳ್ಳುವುದು. ರೈತರು ಖರೀದಿ ವಿವರಗಳನ್ನು ಒಪ್ಪಿ ನಮೂದಿಸಿದ ನಂತರ ಸ್ವೀಕೃತಿಯನ್ನು ಮುದ್ರಿಸಿ ರೈತರರಿಗೆ ನೀಡಲಾಗುವುದು. ರೈತರು ಭತ್ತ/ರಾಗಿ/ಜೋಳ ಸರಬರಾಜು ಮಾಡುವಾಗ ಎಫ್.ಎ.ಕ್ಯೂ ಗುಣಮಟ್ಟವನ್ನು ಪರಿಶೀಲಿಸಿ ಖರೀದಿಸಲಾಗುವುದು.
ರೈತರ ಖರೀದಿ ಮಿತಿ:
ಜೋಳವನ್ನು ಪ್ರತಿ ರೈತರಿಂದ ಪ್ರತಿ ಎಕರೆಗೆ 20 ಕ್ವಿಂಟಾಲ್ ನಂತೆ ಗರಿಷ್ಠ 150 ಕ್ವಿಂ ಮೀರದಂತೆ ಖರೀದಿಸತಕ್ಕದ್ದು.
ಹಣ ಪಾವತಿ:
ಬೆಂಬಲ ಬೆಲೆ ಯೋಜನೆಯಡಿ ಜೋಳ ಸರಬರಾಜು ಮಾಡಿದ ರೈತರಿಗೆ ಅವರು ಕೃಷಿ ಇಲಾಖೆಯಲ್ಲಿ ನೋಂದಾಯಿಸಿ ಕೊಂಡಿರುವ ಬ್ಯಾಂಕ್ ಖಾತೆಗೆ ಆರ್.ಟಿ.ಜಿ.ಎಸ್ ಮೂಲಕ ಹಣ ಪಾವತಿಸಲಾಗುವುದು.
ದಲ್ಲಾಳಿಗಳಿಗೆ/ಏಜೆಂಟರ್ಗಳಿಗೆ ಎಚ್ಚರಿಕೆ:
ಮಧ್ಯವರ್ತಿಗಳು/ಏಜೆಂಟರ್ಗಳು ಖರೀದಿ ಕೇಂದ್ರಗಳಿಗೆ ಜೋಳವನ್ನು ತಂದಲ್ಲಿ ಅಂತಹವರ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು. ಬೆಂಬಲ ಬೆಲೆ ಯೋಜನೆ ಬಗ್ಗೆ ರೈತರಿಗೆ ಯಾವುದೇ ಸಮಸ್ಯೆಗಳಿದ್ದರೆ ಜಿಲ್ಲಾ ವ್ಯವಸ್ಥಾಪಕರು ಕರ್ನಾಟಕ ಕೃಷಿ ಮಾರಾಟ ಮಂಡಳಿ ಬಳ್ಳಾರಿ ಇವರು ಹಾಗೂ ತಾಲ್ಲೂಕಿನ ತಹಸಿಲ್ದಾರ್/ ಕೃಷಿ ಅಧಿಕಾರಿ/ ಎ.ಪಿ.ಎಂ.ಸಿ ಕಾರ್ಯದರ್ಶಿ/ರೈತ ಸಂಪರ್ಕ ಕೇಂದ್ರಗಳನ್ನು ಸಂಪರ್ಕಿಸಲು ಕೋರಿದೆ.
ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳಿ ನಿಯಮಿತ, ಬಳ್ಳಾರಿ ಅಥವಾ ಸೈಯದ್ ವಸೀಮ್ ಪಾಷ (ಮೊ.9449864453) ಇವರನ್ನು ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.