ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಜಾಹೀರಾತು ಗಮನಿಸಿ ಆನ್ಲೈನ್ ನಲ್ಲಿ ಸೀರೆ ಬುಕ್ ಮಾಡಿದ್ದ ಮಹಿಳಾ ಐಎಎಸ್ ಅಧಿಕಾರಿ ವಂಚನೆಗೊಳಗಾಗಿದ್ದಾರೆ.
ರಾಜ್ಯದ ಸಕಾಲ ಮಿಷನ್ ನಿರ್ದೇಶಕಿ ಪಲ್ಲವಿ ಅಕುರಾತಿ ವಂಚನೆಗೆ ಒಳಗಾದ ಐಎಎಸ್ ಅಧಿಕಾರಿ. ಅವರು ನೀಡಿದ ದೂರಿನ ಮೇರೆಗೆ ಪೂರ್ವ ವಿಭಾಗದ ಸೈಬರ್ ಕ್ರೈಮ್ ಠಾಣೆ ಪೋಲೀಸರು ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ಕಳೆದ ತಿಂಗಳು ಪೂರ್ಣಿಮಾ ಕಲೆಕ್ಷನ್ ಎಂಬ ಯುಟ್ಯೂಬ್ ಚಾನೆಲ್ ನೋಡುವಾಗ ತಮಿಳುನಾಡಿನ ಮಧುರೈ ಸುಂಗುಡಿ ಕಾಟನ್ ಸೀರೆ ಬಗ್ಗೆ ಜಾಹೀರಾತು ಕಂಡು ಬಂದಿದೆ. ಇದನ್ನು ಖರೀದಿಸುವ ಉದ್ದೇಶದಿಂದ ಪಲ್ಲವಿ ಅವರು ಈ ಸೀರೆಯ ಸ್ಕ್ರೀನ್ ಶಾಟ್ ಫೋಟೋ ತೆಗೆದು ಪೂರ್ಣಿಮಾ ಕಲೆಕ್ಷನ್ ವಾಟ್ಸಪ್ ಗೆ ಕಳುಹಿಸಿದ್ದಾರೆ. ಜೊತೆಗೆ ಆನ್ಲೈನ್ ಮೂಲಕ ಮಾರ್ಚ್ 10ರಂದು 850 ರೂ. ಪಾವತಿಸಿದ್ದಾರೆ.
ಒಂದು ತಿಂಗಳು ಕಳೆದರೂ ಸೀರೆ ಕಳುಹಿಸಿಕೊಟ್ಟಿಲ್ಲ. ವಿಚಾರಿಸಲು ಕರೆ ಮಾಡಿದಾಗಲೂ ಪ್ರತಿಕ್ರಿಯೆ ನೀಡಿಲ್ಲ. ಸಂದೇಶ ಕಳುಹಿಸಿದರೂ ಯಾವುದೇ ಸ್ಪಂದನೆ ವ್ಯಕ್ತವಾಗದ ಹಿನ್ನೆಲೆಯಲ್ಲಿ ಸೈಬರ್ ಕ್ರೈಂ ಪೋಲಿಸ್ ಠಾಣೆಗೆ ಪಲ್ಲವಿ ಅಕುರಾತಿ ದೂರು ನೀಡಿದ್ದಾರೆ.