ನವದೆಹಲಿ: ಜಮ್ಮು-ಕಾಶ್ಮೀರದ ಪಹಲ್ಗಾಮ್ ನಲ್ಲಿ ಉಗ್ರರು ನಡೆಸಿದ ಗುಂಡಿನ ದಾಳಿಯಲ್ಲಿ ಇಬ್ಬರು ಕನ್ನಡಿಗರು ಸೇರಿ ಒಟ್ಟು 26 ಜನರು ಬಲಿಯಾಗಿದ್ದು, ಮೃತದೇಹಗಳನ್ನು ಆಯಾ ರಾಜ್ಯಗಳಿಗೆ ತಲುಪಿಸುವ ವ್ಯವಸ್ಥೆಯನ್ನು ಜಮ್ಮು-ಕಾಶ್ಮೀರ ಸರ್ಕಾರ, ಸ್ಥಳೀಯ ಆಡಳಿತ ಹಾಗೂ ಆಯಾ ರಾಜ್ಯ ಸರ್ಕಾರಗಳು ಮಾಡುತ್ತಿವೆ. ವಾರದ ಹಿಂದಷ್ಟೇ ವಿವಾಹವಾಗಿದ್ದ ಲೆಫ್ಟಿನೆಂಟ್ ನೇವಿ ಆಫೀಸರ್ ಕೂಡ ಉಗ್ರರ ಗುಂಡೇಟಿಗೆ ಬಲಿಯಾಗಿದ್ದಾರೆ.
ವಾರದ ಹಿಂದಷ್ಟೇ ಮದುವೆಯಾಗಿದ್ದ ಲೆ.ನೇವಿ ಆಫೀಸರ್ ವಿನಯ್ ನರ್ವಾಲ್ ಪತ್ನಿ ಜೊತೆ ಜಮ್ಮು-ಕಾಶ್ಮೀರದ ಪ್ರವಾಸಕ್ಕೆ ತೆರಳಿದ್ದರು. ಈ ವೇಳೆ ಪಹಲ್ಗಾಮ್ ನಲ್ಲಿ ಉಗ್ರರು ನಡೆಸಿದ ಗುಂಡಿನ ದಾಳಿಯಲ್ಲಿ ಪತ್ನಿಯ ಕಣ್ಮುಂದೆಯೇ ಹುತಾತ್ಮರಾಗಿದ್ದಾರೆ. ಲೆ.ನರ್ವಾಲ್ ಅವರ ಪಾರ್ಥಿವ ಶರೀರ ದೆಹಲಿಗೆ ಬಂದು ತಲುಪಿದೆ.
ಮೃತದೇಹದ ಮುಂದೆ ಪತ್ನಿ ಕಣ್ಣೀರಿಟ್ಟು ಗೋಳಾಡುತ್ತಿರುವ ದೃಶ್ಯ ಕರುಳುಹಿಂಡುವಂತಿದೆ. ಕುಟುಂಬದವರು, ಸಂಬಂಧಿಕರ ಆಕ್ರಂದನ ಮುಗಿಲುಮುಟ್ಟಿದೆ.