ಬೆಂಗಳೂರು: ಹೆಚ್ಚಿನ ಬಡ್ಡಿದರದ ಆಮಿಷವೊಡ್ಡಿ ಕೇರಳ ಮೂಲದ ಕೋ-ಆಪರೇಟಿವ್ ಸೊಸೈಟಿ ಮಹಾವಂಚನೆ ಎಸಗಿರುವ ಘಟನೆ ಬೆಂಗಳುರಿನಲ್ಲಿ ನಡೆದಿದೆ.
ಕೇರಳ ಮೂಲದ ದಿ ಮಲಬಾರ್ ಮಲ್ಟಿ ಸ್ಟೇಟ್ ಆಗ್ರೋ ಕೋ-ಆಪರೇಟಿವ್ ಸೊಸೈಟಿ ಬೆಂಗಳೂರು ಹೊರವಲಯದ ಸರ್ಜಾಪುರ ಸುತ್ತಮುತ್ತ ಸಾವಿರಾರು ಗ್ರಾಹಕರಿಗೆ ವಂಚಿಸಿರುವ ಆರೋಪ ಕೇಳಿಬಂದಿದೆ. ಹೆಚ್ಚಿನ ಬಡ್ಡಿ ದರ ನೀಡುವುದಾಗಿ ಹೇಳಿ ಗ್ರಾಹಕರಿಗೆ ಆಮಿಷವೊಡ್ಡಿದ್ದ ಸೊಸೈಟಿ ಕೋಟಿ ಕೋಟಿ ವಂಚಿಸಿದೆ.
ಹಿರಿಯ ನಾಗರಿಕರನ್ನೇ ಟಾರ್ಗೆಟ್ ಮಾಡಿ ಲಕ್ಷಾಂತರ ರೂಪಾಯಿ ಸ್ಥಿರ ಠೇವಣಿ ಮತ್ತು ಡೈಲಿ, ವೀಕ್ಲಿ ಹಾಗೂ ಮಂತ್ಲಿ ಪಿಗ್ಮಿ ಸಂಗ್ರಹ ಮಾಡಿ ಹಣ ಸಂಗ್ರಹಿಸಿತ್ತು. 2019ರಲ್ಲಿ ಸರ್ಜಾಪುರದ ದೊಮಸಂದ್ರದಲ್ಲಿ ಶಾಖೆ ಆರಂಭಿಸಿದ್ದ ದಿ ಮಲಬಾರ್ ಮಲ್ಟಿ ಸ್ಟೇಟ್ ಆಗ್ರೋ ಕೋ-ಆಪರೇಟಿವ್ ಸೊಸೈಟಿ ಗ್ರಾಹಕರಿಂದ ವಿವಿಧ ರೀತಿಯಲ್ಲಿ ಠೇವಣಿ ಇರಿಸಿಕೊಂಡಿದ್ದು, ಕೋ-ಆಪರೇಟಿವ್ ಸೊಸೈಟಿ ನಂಬಿ ಗ್ರಾಹಕರು ಲಕ್ಷ ಲಕ್ಷ ಹಣವನ್ನು ಠೇವಣಿ ಇಟ್ಟಿದ್ದಾರೆ.
ಹೀಗೆ ಹಣ ಠೇವಣಿ ಇಟ್ಟುಕೊಂಡ ಕೋ-ಆಪರೇಟಿವ್ ಸೊಸೈಟಿ 2024ರಲ್ಲಿ ಏಕಾಏಕಿ ಬಾಅಗಿಲು ಮುಚ್ಚಿದೆ. ಅಧಿಕಾರಿಗಳು, ಸಿಬ್ಬಂದಿಗಳು ಪರಾರಿಯಾಗಿದ್ದಾರೆ. ಹಣ ಕಳೆದುಕೊಂಡಿರುವ ಗ್ರಾಹಕರು ಸಂಕಷ್ಟಕ್ಕೀಡಾಗಿದ್ದಾರೆ.
ಕ್ಯಾನ್ಸರ್ ರೋಗಿ ರೈತ ಚಂದ್ರಾರೆಡ್ಡಿ ಎಂಬುವವರು ತಮ್ಮ ಕೊನೆ ದಿನಗಳಿಗಾಗಿ ಕೂಡಿಟ್ಟ ಹಣವನ್ನು ಇದೇ ಕೋ-ಆಪರೇಟಿವ್ ಸೊಸೈಟಿಯಲ್ಲಿ ಇಟ್ಟಿದ್ದರು. ಸೊಸೈಟಿ ಸಿಬ್ಬಂದಿಗಳು, ಅಧಿಕಾರಿಗಳ ಮಾತು ಕೇಳಿ ಹತ್ತು ಲಕ್ಷ ಕಳೆದುಕೊಂಡಿದ್ದಾರೆ. ತಮಗೆ ಆಗಿರುವ ಅನ್ಯಾಯದ ಬಗ್ಗೆ ಸರ್ಜಾಪುರ ಠಾಣೆಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಪೊಲೀಸರು ಕೇವಲ ಸೊಸೈಟಿ ವಿರುದ್ಧ ಎನ್ ಸಿಆರ್ ದಾಖಲಿಸಿ ಕೈತೊಳೆದುಕೊಂಡಿದ್ದಾರೆ. ಕೋ-ಆಪರೇಟಿವ್ ಸೊಸೈಟಿ ಅಧಿಕಾರಿಗಳು, ಸಿಬ್ಬಂದಿಗಳ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.