ಬೆಂಗಳೂರು: ಕರ್ನಾಟಕದ ಮಾಜಿ ಪೊಲೀಸ್ ಮಹಾನಿರ್ದೇಶಕ(ಡಿಜಿಪಿ) ಓಂ ಪ್ರಕಾಶ್ ಹತ್ಯೆಯಾದ ಕುರಿತಂತೆ ಅವರ ಪುತ್ರ ಸ್ಪೋಟಕ ಮಾಹಿತಿ ನೀಡಿದ್ದಾರೆ.
‘ತಂದೆಗೆ ಬೆದರಿಕೆ ಹಾಕಲಾಗುತ್ತಿತ್ತು, ತಾಯಿ ಮತ್ತು ಸಹೋದರಿ ಪ್ರತಿದಿನ ಜಗಳವಾಡುತ್ತಿದ್ದರು’ ಎಂದು ಓಂ ಪ್ರಕಾಶ್ ಅವರ ಮಗ ಕಾರ್ತಿಕೇಶ್ ದೂರು ನೀಡಿದ್ದು, ಎಫ್‌ಐಆರ್ ದಾಖಲಿಸಲಾಗಿದೆ.
ತಮ್ಮ ತಾಯಿ ಮತ್ತು ಸಹೋದರಿ ತಮ್ಮ ತಂದೆಯನ್ನು ಕೊಂದಿದ್ದಾರೆ ಎಂದು ಆರೋಪಿಸಿದ್ದಾರೆ.
ತಮ್ಮ ತಂದೆಯ ದೇಹದ ಪಕ್ಕದಲ್ಲಿ ಒಡೆದ ಬಾಟಲಿ ಮತ್ತು ಚಾಕು ಸಿಕ್ಕಿದೆ ಎಂದು ಅವರು ಹೇಳಿಕೊಂಡಿದ್ದಾರೆ.
ನನ್ನ ತಾಯಿ ಮತ್ತು ಸಹೋದರಿ ಖಿನ್ನತೆಯಿಂದ ಬಳಲುತ್ತಿದ್ದರು ಮತ್ತು ಪ್ರತಿದಿನ ನಮ್ಮ ತಂದೆಯೊಂದಿಗೆ ಜಗಳವಾಡುತ್ತಿದ್ದರು ಎಂದು ಕಾರ್ತಿಕೇಶ್ ಆರೋಪಿಸಿದ್ದಾರೆ.
ಕಳೆದ ವಾರದಿಂದ ನನ್ನ ತಂದೆಗೆ ಜೀವ ಬೆದರಿಕೆ ಹಾಕಲಾಗುತ್ತಿತ್ತು, ನಂತರ ಅವರು ನನ್ನ ಸಹೋದರಿ ಸರಿತಾ ಕುಮಾರಿ ಅವರ ಮನೆಯಲ್ಲಿ ಇರಲು ಹೋಗಿದ್ದರು. ನಂತರ, ತನ್ನ ಸಹೋದರಿ ಓಂ ಪ್ರಕಾಶ್ ಅವರನ್ನು ಮನೆಗೆ ಮರಳುವಂತೆ ವಿನಂತಿಸಿಕೊಂಡಿದ್ದಾರೆ. ಏಪ್ರಿಲ್ 18 ರಂದು ಮಾಜಿ ಡಿಜಿಪಿ ತಮ್ಮ ಮನೆಗೆ ಮರಳಿದ್ದರು ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ,
ನೆರೆಹೊರೆಯವರಿಂದ ತಮ್ಮ ತಂದೆಯ ಶವ ರಕ್ತದ ಮಡುವಿನಲ್ಲಿ ಪತ್ತೆಯಾಗಿದೆ ಎಂದು ಕರೆ ಬಂದಾಗ ಕಾರ್ತಿಕೇಶ್ ಅವರು ಮನೆಯಲ್ಲಿ ಇರಲಿಲ್ಲ ಎಂದು ಹೇಳಿದ್ದಾರೆ.
ನಾನು ಸಂಜೆ 5.45 ರ ಸುಮಾರಿಗೆ ಬಂದೆ ಮತ್ತು ಪೊಲೀಸರು ಮತ್ತು ಸಾರ್ವಜನಿಕರು ನನ್ನ ಮನೆಯ ಸುತ್ತಲೂ ಜಮಾಯಿಸಿದ್ದರು. ನನ್ನ ತಂದೆಯ ಶವ ಮತ್ತು ತಲೆಯ ಸುತ್ತಲೂ ರಕ್ತ ಇತ್ತು ಎಂದು ಅವರು ಪೊಲೀಸರಿಗೆ ತಿಳಿಸಿದ್ದಾರೆ.
ಓಂ ಪ್ರಕಾಶ್ ಅವರ ಸಾವಿನ ಕುರಿತು ಹೆಚ್ಚಿನ ತನಿಖೆ ನಡೆಸಲಾಗಿದೆ. ಕೊಲೆ ಪ್ರಕರಣದಲ್ಲಿ ಪ್ರಮುಖ ಶಂಕಿತಳಾಗಿ ಅವರ ಪತ್ನಿ ಪಲ್ಲವಿ ಅವರನ್ನು ಪೊಲೀಸರು ಬಂಧಿಸಿದ್ದಾರೆ.
1981 ರ ಬ್ಯಾಚ್‌ನ ಐಪಿಎಸ್ ಅಧಿಕಾರಿ ಬಿಹಾರ ಮೂಲದ ಪ್ರಕಾಶ್, ಭಾನುವಾರ ನಗರದ ಐಷಾರಾಮಿ ಹೆಚ್‌ಎಸ್‌ಆರ್ ಲೇಔಟ್‌ನಲ್ಲಿರುವ ಅವರ ಮೂರು ಅಂತಸ್ತಿನ ಮನೆಯ ನೆಲ ಮಹಡಿಯಲ್ಲಿ ರಕ್ತದ ಮಡುವಿನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. 68 ವರ್ಷದ ನಿವೃತ್ತ ಐಪಿಎಸ್ ಅಧಿಕಾರಿ ಬಿಹಾರದ ಚಂಪಾರಣ್ ಮೂಲದವರಾಗಿದ್ದು, ಭೂವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರು. ಅವರನ್ನು ಮಾರ್ಚ್ 1, 2015 ರಂದು ಪೊಲೀಸ್ ಮಹಾನಿರ್ದೇಶಕರಾಗಿ ನೇಮಿಸಲಾಗಿತ್ತು.