ಬೆಳಗಾವಿ: ಮಳೆ ಅವಾಂತರದಿಂದಾಗಿ ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಬೇಕಿದ್ದ ವಿಮಾನ ಬೆಳಗಾವಿಯಲ್ಲಿ ಲ್ಯಾಂಡ್ ಆಗಿದ್ದು, ಪ್ರಯಾಣಿಕರು ಪರದಾಟ ನಡೆಸಿರುವ ಘಟನೆ ನಡೆದಿದೆ.
ತಿರುಪತಿಯಿಂದ ಶಿವಮೊಗ್ಗಕ್ಕೆ ತೆರಳಬೇಕಿದ್ದ ಸ್ಟಾರ್ ಏರ್ ಲೈನ್ಸ್ ವಿಮಾನ ಶಿವಮೊಗ್ಗದಲ್ಲಿ ಭಾರಿ ಮಳೆ, ಹವಾಮಾನ ವೈಪರಿತ್ಯದಿಂದಾಗಿ ಶಿವಮೊಗ್ಗ ಬದಲು ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಿದೆ. ಇದರಿಂದಾಗಿ ಶಿವಮೊಗ್ಗದಲ್ಲಿ ಇಳಿಯಬೇಕಾದ ಪ್ರಯಾಣಿಕರು ತೊಂದರೆಗೆ ಸಿಲುಕಿದ್ದಾರೆ.
ಪ್ರಯಾಣಿಕರಿಗೆ ಯಾವುದೇ ಬದಲಿ ವ್ಯವಸ್ಥೆಯನ್ನೂ ವಿಮಾನಯಾನ ಸಂಸ್ಥೆ ಕಲ್ಪಿಸಿಲ್ಲ. ವಿಮಾನದಲ್ಲಿ 60 ಪ್ರಯಾಣಿಕರು ಇದ್ದರು. ನಿನ್ನೆ ರಾತ್ರಿ 8:30ಕ್ಕೆ ಸ್ಟಾರ್ ಏರ್ ಲೈನ್ಸ್ ವಿಮಾನ ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಬಂದು ಇಳಿದಿದೆ. ಪ್ರಯಾಣಿಕರು ವಿಮಾನಯಾನ ಸಂಸ್ಥೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೇರೆ ವ್ಯವಸ್ಥೆ ಮಾಡದೇ, ಯಾವುದೇ ಮಾಹಿತಿ ನೀಡದೇ ಏಕಾಏಕಿ ಶಿವಮೊಗ್ಗ ಬದಲು ಬೆಳಗಾವಿಯಲ್ಲಿ ಲ್ಯಾಂಡ್ ಮಾಡಲಾಗಿದ್ದು, ತೊಂದರೆಗೆ ಸಿಲುಕಿದ್ದಾಗಿ ಕಿಡಿಕಾರಿದ್ದಾರೆ. ವಿಮಾನ ಸಂಸ್ಥೆಯಿಂದ ಯಾವುದೇ ವ್ಯವಸ್ಥೆ ಇಲ್ಲದ ಕಾರಣ ಹಲವು ಪ್ರಯಾಣಿಕರು ಅನಿವಾರ್ಯವಾಗಿ ಲಾಡ್ಜ್ ನಲ್ಲಿ ವಾಸ್ತವ್ಯ ಹೂಡುವ ಹಾಗೂ ಬೆಳಗಾವಿಯಿಂದ ಶಿವಮೊಗ್ಗಕ್ಕೆ ತಾವೇ ಪ್ರಯಾಣಿಸಬೇಕಾದ ಸ್ಥಿತಿ ಎದುರಾಗಿದೆ.