ಟೆಕ್ಸಾಸ್: ಅನಾಥ ಮತ್ತು ಸಂಕಷ್ಟದಲ್ಲಿರುವ ಮಕ್ಕಳ ಆಶ್ರಯ ತಾಣವಾದ ಅಮೆರಿಕಾದ ಟೆಕ್ಸಾಸ್‌ನ ಕ್ರಿಶ್ಚಿಯನ್ ಅಕಾಡೆಮಿಯೊಂದು ಇದೀಗ ಆಘಾತಕಾರಿ ಆರೋಪಗಳಿಂದ ಸುದ್ದಿಯಲ್ಲಿದೆ. ಕೆಲ ತಿಂಗಳ ಹಿಂದಷ್ಟೇ ಲೈಂಗಿಕ ದೌರ್ಜನ್ಯದ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದ ವ್ಯಕ್ತಿಯ ಮಗಳೇ ಇದೀಗ ವಿದ್ಯಾರ್ಥಿನಿಯೊಂದಿಗೆ ಅನುಚಿತ ಸಂಬಂಧ ಹೊಂದಿದ್ದ ಆರೋಪದ ಮೇಲೆ ಪೊಲೀಸರ ಅತಿಥಿಯಾಗಿದ್ದಾಳೆ. ಈ ಬೆಳವಣಿಗೆ ಸಂಸ್ಥೆಯ ಆಡಳಿತ ಮಂಡಳಿ ಮತ್ತು ಸಾರ್ವಜನಿಕ ವಲಯದಲ್ಲಿ ತೀವ್ರ ಆತಂಕ ಮೂಡಿಸಿದೆ.
ಬಂಧಿತ ಶಿಕ್ಷಕಿಯನ್ನು ಬ್ರೂಕ್ ಮಾರ್ಟಿನೆಜ್ (30) ಎಂದು ಗುರುತಿಸಲಾಗಿದೆ. ಬ್ರಾಜೋಸ್ ಕೌಂಟಿಯ ಸ್ಟಿಲ್ ಕ್ರೀಕ್ ಕ್ರಿಶ್ಚಿಯನ್ ಅಕಾಡೆಮಿ ರಾಂಚ್‌ನಲ್ಲಿ ಅವರು ಬೋಧಕಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಈ ಸಂಸ್ಥೆಯು 8 ರಿಂದ 18 ವರ್ಷ ವಯಸ್ಸಿನ ಸಂಕಷ್ಟಕ್ಕೆ ಸಿಲುಕಿದ ಮಕ್ಕಳ ಆಶ್ರಯ ತಾಣವಾಗಿದೆ. ಬ್ರೂಕ್ ಮಾರ್ಟಿನೆಜ್ ಅವರು 2024 ರಲ್ಲಿ 18 ವರ್ಷದ ವಿದ್ಯಾರ್ಥಿನಿಯೊಂದಿಗೆ ಅನುಚಿತ ಸಂಬಂಧ ಹೊಂದಿದ್ದರು ಎಂದು ಬ್ರಾಜೋಸ್ ಕೌಂಟಿ ಶೆರಿಫ್ ಇಲಾಖೆ ಆರೋಪಿಸಿದೆ.
ಶಾಲೆಯ ಸಿಬ್ಬಂದಿಯೊಬ್ಬರು ಈ ವಿಷಯವನ್ನು ಪೊಲೀಸರಿಗೆ ತಿಳಿಸಿದ ನಂತರ ಏಪ್ರಿಲ್ 10 ರಂದು ಬ್ರೂಕ್ ಮಾರ್ಟಿನೆಜ್ ಅವರನ್ನು ಬಂಧಿಸಲಾಯಿತು. ವಿಶೇಷವೆಂದರೆ, ಈಕೆಯ ತಂದೆ ಜಾನ್ ಎಡ್ವರ್ಡ್ ಮಾರ್ಟಿನೆಜ್ (57) ಅವರನ್ನು ಇದೇ ಶಾಲೆಯಲ್ಲಿ “ಹೌಸ್ ಪೇರೆಂಟ್” ಆಗಿ ಕಾರ್ಯನಿರ್ವಹಿಸುತ್ತಿದ್ದಾಗ, ಜನವರಿ 20 ರಂದು ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಫೆಬ್ರವರಿಯಲ್ಲಿ ಬಂಧಿಸಲಾಗಿತ್ತು.
“ಕುಟುಂಬ ಸ್ನೇಹಿ ವಾತಾವರಣ” ನಿರ್ಮಾಣದ ಉದ್ದೇಶದಿಂದ ಸ್ಥಾಪಿಸಲಾದ ಈ ಅಕಾಡೆಮಿಯಲ್ಲಿ ಇಂತಹ ಅಹಿತಕರ ಘಟನೆಗಳು ನಡೆದಿರುವುದು ನಿಜಕ್ಕೂ ದುರದೃಷ್ಟಕರ. ಸಂಸ್ಥೆಯು ಈ ಆರೋಪಗಳ ಬಗ್ಗೆ ತೀವ್ರ ದುಃಖ ಮತ್ತು ನಿರಾಶೆಯನ್ನು ವ್ಯಕ್ತಪಡಿಸಿದ್ದು, ತನಿಖೆಗೆ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದೆ. ಬಂಧಿತ ಬ್ರೂಕ್ ಮಾರ್ಟಿನೆಜ್ ಅವರನ್ನು ನೇಮಕ ಮಾಡುವ ಮೊದಲು ಕಟ್ಟುನಿಟ್ಟಾದ ಹಿನ್ನೆಲೆ ಪರಿಶೀಲನೆ ನಡೆಸಲಾಗಿತ್ತು ಮತ್ತು ಅವರು ಈ ವರ್ಷದ ಆರಂಭದಲ್ಲಿ ಸಂಸ್ಥೆಯನ್ನು ತೊರೆದಿದ್ದರು ಎಂದು ಅಕಾಡೆಮಿ ಹೇಳಿದೆ.
ಜಾನ್ ಮಾರ್ಟಿನೆಜ್ ಅವರ ಬಂಧನದ ನಂತರ, ಬಾಲಕಿಯೊಬ್ಬಳು ಆತ ತನ್ನನ್ನು ಮತ್ತು ಇತರ ಮಕ್ಕಳನ್ನು ಕ್ಯಾಮೆರಾಗಳಿಲ್ಲದ ಖಾಸಗಿ ಕೋಣೆಗೆ ಕರೆದೊಯ್ಯುತ್ತಿದ್ದರು ಮತ್ತು ಅನುಚಿತವಾಗಿ ಸ್ಪರ್ಶಿಸುತ್ತಿದ್ದರು ಎಂದು ಪೊಲೀಸರಿಗೆ ತಿಳಿಸಿದ್ದಳು. ಅಲ್ಲದೆ, ಈ ವಿಷಯವನ್ನು ಯಾರಿಗಾದರೂ ಹೇಳಿದರೆ ಸಂಸ್ಥೆಯಿಂದ ಹೊರಹಾಕುವುದಾಗಿ ಬೆದರಿಕೆ ಹಾಕಿದ್ದರು ಎಂದು ಆರೋಪಿಸಲಾಗಿದೆ.
ಪ್ರಸ್ತುತ, ಬ್ರೂಕ್ ಮಾರ್ಟಿನೆಜ್ ಜಾಮೀನು ಪಡೆದು ಬಿಡುಗಡೆಯಾಗಿದ್ದು, ಈ ಪ್ರಕರಣದ ತನಿಖೆ ಮುಂದುವರೆದಿದೆ. ಈ ಆಘಾತಕಾರಿ ಘಟನೆ ಅನಾಥ ಮಕ್ಕಳ ಆರೈಕೆ ಸಂಸ್ಥೆಗಳ ಸುರಕ್ಷತೆ ಮತ್ತು ಸಿಬ್ಬಂದಿಯ ನಡವಳಿಕೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

