ಬಾಲಿವುಡ್ ನಟಿ ಊರ್ವಶಿ ರೌಟೇಲಾ, ಉತ್ತರಾಖಂಡದ ದೇವಾಲಯವೊಂದು ತಮ್ಮ ಹೆಸರಿನಲ್ಲಿದೆ ಎಂದು ಹೇಳಿಕೆ ನೀಡುವ ಮೂಲಕ ವಿವಾದ ಸೃಷ್ಟಿಸಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ, “ಬದರಿನಾಥ ಧಾಮಕ್ಕೆ ಭೇಟಿ ನೀಡಿದರೆ, ಅದರ ಪಕ್ಕದಲ್ಲೇ ‘ಊರ್ವಶಿ ದೇಗುಲ’ವಿದೆ” ಎಂದು ಹೇಳಿದ್ದರು. ಅಲ್ಲದೆ, ಭಕ್ತರು ಅಲ್ಲಿ ತಮ್ಮ ಭಾವಚಿತ್ರಗಳಿಗೆ ಹಾರ ಹಾಕಿ ಪೂಜೆ ಸಲ್ಲಿಸುತ್ತಾರೆ ಎಂದೂ ಅವರು ಹೇಳಿಕೊಂಡಿದ್ದಾರೆ. ಈ ಹೇಳಿಕೆ ಅರ್ಚಕರು, ಧಾರ್ಮಿಕ ಮುಖಂಡರು ಮತ್ತು ಸ್ಥಳೀಯ ನಿವಾಸಿಗಳಿಂದ ತೀವ್ರ ವಿರೋಧಕ್ಕೆ ಕಾರಣವಾಗಿದೆ. ಇದು ಕ್ಷೇತ್ರದ ಪವಿತ್ರ ಇತಿಹಾಸವನ್ನು ತಿರುಚುವ ಯತ್ನ ಎಂದು ಅವರು ಕಿಡಿಕಾರಿದ್ದಾರೆ.
ಸಂದರ್ಶಕ ಸಿದ್ಧಾರ್ಥ್ ಕಣ್ಣನ್ ಅವರೊಂದಿಗೆ ಮಾತನಾಡಿದ ರೌಟೇಲಾ, “ಉತ್ತರಾಖಂಡದಲ್ಲಿ ನನ್ನ ಹೆಸರಿನ ದೇವಾಲಯವಿದೆ. ಬದರಿನಾಥಕ್ಕೆ ಹೋದರೆ, ಅದರ ಪಕ್ಕದಲ್ಲೇ ‘ಊರ್ವಶಿ ದೇಗುಲ’ವಿದೆ” ಎಂದರು. ಜನರು ಅಲ್ಲಿ ಆಶೀರ್ವಾದ ಪಡೆಯುತ್ತಾರೆಯೇ ಎಂದು ಕೇಳಿದಾಗ ನಗುತ್ತಾ, “ಅದು ದೇವಾಲಯವಾದ್ದರಿಂದ ಅದನ್ನೇ ಮಾಡುತ್ತಾರೆ” ಎಂದು ಉತ್ತರಿಸಿದರು. ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ದೇಗುಲಕ್ಕೆ ಭೇಟಿ ನೀಡಿ ತಮ್ಮನ್ನು ‘ದಮದಮಾಮಾಯಿ’ ಎಂದು ಪ್ರೀತಿಯಿಂದ ಕರೆಯುತ್ತಾರೆ ಎಂದೂ ಅವರು ಹೇಳಿಕೊಂಡಿದ್ದಾರೆ.
ಆದರೆ, ಈ ದೇವಾಲಯವು ನಟಿಗೆ ಸಮರ್ಪಿತವಾದದ್ದಲ್ಲ. ಬದಲಾಗಿ, ಹಿಂದೂ ಪುರಾಣಗಳಲ್ಲಿ ಉಲ್ಲೇಖಿಸಲಾದ ದೇವಲೋಕದ ಅಪ್ಸರೆಯಾದ ಊರ್ವಶಿ ದೇವಿಗೆ ಅರ್ಪಿತವಾದ ಪ್ರಾಚೀನ ಧಾರ್ಮಿಕ ಸ್ಥಳವಾಗಿದೆ. ಕೆಲವರು ವಿಷ್ಣುವಿನ ತೊಡೆಯಿಂದ ಹುಟ್ಟಿದವಳು ಎಂದು ನಂಬಿದರೆ, ಇತರರು ಸತಿ ದೇವಿಯ ದಂತಕಥೆಯೊಂದಿಗೆ ಸಂಬಂಧ ಹೊಂದಿದ್ದಾರೆಂದು ಭಾವಿಸುತ್ತಾರೆ. ಈ ದೇಗುಲವು 108 ಶಕ್ತಿಪೀಠಗಳಲ್ಲಿ ಒಂದಾಗಿದ್ದು, ಹಿಂದೂ ಯಾತ್ರಿಕರಲ್ಲಿ ಬಹಳ ಪೂಜ್ಯನೀಯವಾಗಿದೆ.
ಸ್ಥಳೀಯ ಧಾರ್ಮಿಕ ಅಧಿಕಾರಿಗಳು ರೌಟೇಲಾ ಅವರ ಹೇಳಿಕೆಯನ್ನು “ತಪ್ಪುದಾರಿಗೆಳೆಯುವ” ಮತ್ತು “ಅಗೌರವಯುತ” ಎಂದು ಖಂಡಿಸಿದ್ದಾರೆ. ಬದರಿನಾಥ ಧಾಮದ ಮಾಜಿ ಧಾರ್ಮಿಕ ಅಧಿಕಾರಿ ಭುವನ್ ಚಂದ್ರ ಉನಿಯಾಲ್, “ಇದು ಅವರ ದೇವಾಲಯವಲ್ಲ. ಇಂತಹ ಹೇಳಿಕೆಗಳು ಸ್ವೀಕಾರಾರ್ಹವಲ್ಲ. ಈ ದೇವಾಲಯವು ಪವಿತ್ರವಾದದ್ದು ಮತ್ತು ಊರ್ವಶಿ ದೇವಿಗೆ ಸಂಬಂಧಿಸಿದೆ. ಇಂತಹ ಹೇಳಿಕೆಗಳ ವಿರುದ್ಧ ಅಧಿಕಾರಿಗಳು ಕಠಿಣ ಕ್ರಮ ಕೈಗೊಳ್ಳಬೇಕು” ಎಂದಿದ್ದಾರೆ.
ಬ್ರಹ್ಮ ಕಪಾಲ್ ತೀರ್ಥ ಪುರೋಹಿತ್ ಸೊಸೈಟಿಯ ಅಧ್ಯಕ್ಷ ಅಮಿತ್ ಸತಿ ಈ ಅಭಿಪ್ರಾಯವನ್ನು ಪ್ರತಿಧ್ವನಿಸಿದ್ದಾರೆ. “ಈ ಹೇಳಿಕೆಗಳು ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುತ್ತವೆ. ಈ ದೇವಾಲಯವು ಪ್ರಾಚೀನ ಆಧ್ಯಾತ್ಮಿಕ ಸ್ಥಳವಾಗಿದೆ ಮತ್ತು ಅದನ್ನು ಸೆಲೆಬ್ರಿಟಿಯೊಂದಿಗೆ ಸಂಯೋಜಿಸುವುದು ತಪ್ಪಲ್ಲದೆ ಆಕ್ಷೇಪಾರ್ಹ” ಎಂದಿದ್ದಾರೆ.
ಬಾಮ್ನಿ ಮತ್ತು ಪಾಂಡುಕೇಶ್ವರದ ಹತ್ತಿರದ ಗ್ರಾಮಸ್ಥರು ಕೂಡ ತಮ್ಮ ಕೋಪವನ್ನು ವ್ಯಕ್ತಪಡಿಸಿದ್ದಾರೆ. “ಈ ದೇವಾಲಯವು ಆಳವಾದ ಪೌರಾಣಿಕ ಮೌಲ್ಯವನ್ನು ಹೊಂದಿದೆ. ಯಾವುದೇ ವ್ಯಕ್ತಿ – ಸೆಲೆಬ್ರಿಟಿ ಆಗಿರಲಿ ಅಥವಾ ಇಲ್ಲದಿರಲಿ – ಅದರ ಮೇಲೆ ವೈಯಕ್ತಿಕ ಹಕ್ಕು ಸಾಧಿಸಲು ಸಾಧ್ಯವಿಲ್ಲ” ಎಂದು ಬಾಮ್ನಿಯ ನಿವಾಸಿ ರಾಮನಾರಾಯಣ ಭಂಡಾರಿ ಹೇಳಿದ್ದಾರೆ.