ಉದ್ಯಮಿಯೊಬ್ಬ ತನ್ನ ಪತ್ನಿಯನ್ನು ಗುಂಡಿಟ್ಟು ಹತ್ಯೆಗೈದು ಬಳಿಕ ತಾನೂ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್ ನಲ್ಲಿ ನಡೆದಿದೆ.
ಕುಲದೀಪ್ ತ್ಯಾಗಿ (46) ಪತ್ನಿ ಕೊಂದು ಆತ್ಮಹತ್ಯೆ ಮಾಡಿಕೊಂಡ ರಿಯಲ್ ಎಸ್ಟೇಟ್ ಉದ್ಯಮಿ. ಸಾವಿಗೂ ಮುನ್ನ ಕಲದೀಪ್ ತ್ಯಾಗಿ ಬರೆದಿಟ್ಟಿರುವ ಡೆತ್ ನೋಟ್ ಪತ್ತೆಯಾಗಿದೆ.
ನನಗೆ ಕ್ಯಾನ್ಸರ್ ಇತ್ತು. ಚಿಕಿತ್ಸೆಗೆ ಹಣ ವ್ಯರ್ಥವಾಗಬಾರದು ಎಂಬ ಕಾರಣಕ್ಕೆ ಇಬ್ಬರೂ ಈ ನಿರ್ಧಾರಕ್ಕೆ ಬಂದೆವು. ಪತ್ನಿ ಅಂಶು ಮತ್ತು ನಾನು ಒಟ್ಟಿಗೆ ಇರಬೇಕು ಎಂದು ನಿರ್ಧರಿಸಿ ಇಬ್ಬರೂ ಈ ನಿರ್ಧಾರ ಮಾಡಿದೆವು. ಮೊದಲು ಪತ್ನಿಯನ್ನು ಕೊಂದು ಬಳಿಕ ನಾನು ಸಾವಿಗೆ ಶರಣಾಗುತ್ತಿದ್ದೇನೆ ಎಂದು ಡೆತ್ ನೋಟ್ ನಲ್ಲಿ ಉಲ್ಲೇಖಿಸಲಾಗಿದೆ.
ಮೃತ ದಂಪತಿಗೆ ಇಬ್ಬರು ಮಕ್ಕಳು. ಕುಲದೀಪ್ ಅವರ ತಂದೆ ನಿವೃತ್ತ ಪೊಲೀಸ್ ಅಧಿಕಾರಿ. ರಾಧಾ ಕುಂಜ್ ಸೊಸೈಟಿಯಲ್ಲಿರುವ ಮನೆಯಲ್ಲಿ ಪರವಾನಗಿ ಪಡೆದ ರಿವಾಲ್ವರ್ ನಿಂದ ಪತ್ನಿಯನ್ನು ಗುಂಡಿಟ್ಟು ಹತ್ಯೆಗೈದು, ಬಳಿಕ ತಾನೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಗುಂಡಿನ ಶಬ್ದ ಕೇಳುತ್ತಿದಂತೆ ತಕ್ಷಣ ಕುಲದೀಪ್ ಕೋಣೆಗೆ ಮನೆಯಲ್ಲಿದ್ದವರು ಧಾವಿಸಿದ್ದಾರೆ. ಆದರೆ ಅಷ್ಟರಲ್ಲೇ ಇಬ್ಬರೂ ರಕ್ತದ ಮಡುವಲ್ಲಿ ಬಿದ್ದಿದ್ದರು. ತಕ್ಷಣ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಿಸದೇ ಇಬ್ಬರೂ ಸಾವನ್ನಪ್ಪಿದ್ದಾರೆ.