BIG NEWS: ದುಬೈ ಬೇಕರಿಯಲ್ಲಿ ಪಾಕ್ ಪ್ರಜೆಯಿಂದ ದಾಳಿ ; ಇಬ್ಬರು ಭಾರತೀಯರ ಸಾವು !

ದುಬೈನ ಬೇಕರಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಭಾರತೀಯರನ್ನು ಪಾಕಿಸ್ತಾನಿ ಪ್ರಜೆಯೊಬ್ಬ ಧಾರ್ಮಿಕ ಘೋಷಣೆಗಳನ್ನು ಕೂಗುತ್ತಾ ಕತ್ತಿಯಿಂದ ಹಲ್ಲೆ ನಡೆಸಿ ಕೊಂದಿದ್ದಾನೆ ಎಂದು ಮೃತರ ಕುಟುಂಬಸ್ಥರು ಮಂಗಳವಾರ ಆರೋಪಿಸಿದ್ದಾರೆ. ತೆಲಂಗಾಣದ ನಿರ್ಮಲ್ ಜಿಲ್ಲೆಯ ಸೋನ್ ಗ್ರಾಮದ ಅಷ್ಟಾಪು ಪ್ರೇಮ್ ಸಾಗರ್ (35) ಏಪ್ರಿಲ್ 11 ರಂದು ಈ ದಾಳಿಯಲ್ಲಿ ಮೃತಪಟ್ಟಿದ್ದಾರೆ ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಪ್ರೇಮ್ ಸಾಗರ್ ಕಳೆದ ಐದು ವರ್ಷಗಳಿಂದ ದುಬೈನಲ್ಲಿ ಬೇಕರಿಯಲ್ಲಿ ಕೆಲಸ ಮಾಡುತ್ತಿದ್ದರು ಮತ್ತು ಎರಡು ವರ್ಷಗಳ ಹಿಂದೆ ತಮ್ಮ ಕುಟುಂಬವನ್ನು ಭೇಟಿ ಮಾಡಿದ್ದರು ಎಂದು ಅವರ ಚಿಕ್ಕಪ್ಪ ತಿಳಿಸಿದ್ದಾರೆ. ಮೃತರು ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಅವರ ಮೃತದೇಹವನ್ನು ಭಾರತಕ್ಕೆ ತರಲು ಸರ್ಕಾರ ಸಹಾಯ ಮಾಡಬೇಕೆಂದು ಕುಟುಂಬಸ್ಥರು ಮನವಿ ಮಾಡಿದ್ದಾರೆ.

ಈ ಮಧ್ಯೆ, ಮತ್ತೊಬ್ಬ ಮೃತ ವ್ಯಕ್ತಿಯನ್ನು ನಿಜಾಮಾಬಾದ್ ಜಿಲ್ಲೆಯ ಶ್ರೀನಿವಾಸ್ ಎಂದು ಗುರುತಿಸಲಾಗಿದೆ ಎಂದು ಕೇಂದ್ರ ಸಚಿವ ಜಿ. ಕಿಶನ್ ರೆಡ್ಡಿ ತಿಳಿಸಿದ್ದಾರೆ. ಈ ದಾಳಿಯಲ್ಲಿ ಸಾಗರ್ ಎಂಬ ಮತ್ತೊಬ್ಬ ವ್ಯಕ್ತಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅವರ ಪತ್ನಿ ಮಾಹಿತಿ ನೀಡಿದ್ದಾರೆ.

ಹತ್ಯೆಗಳ ಬಗ್ಗೆ ದುಃಖ ವ್ಯಕ್ತಪಡಿಸಿರುವ ಕಿಶನ್ ರೆಡ್ಡಿ, ಮೃತರ ದೇಹಗಳನ್ನು ಭಾರತಕ್ಕೆ ತರುವಲ್ಲಿ ಸಹಾಯ ಮಾಡುವಂತೆ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರೊಂದಿಗೆ ಮಾತನಾಡಿದ್ದಾರೆ. “ತೆಲಂಗಾಣದ ನಿರ್ಮಲ್ ಜಿಲ್ಲೆಯ ಅಷ್ಟಾಪು ಪ್ರೇಮ್ ಸಾಗರ್ ಮತ್ತು ನಿಜಾಮಾಬಾದ್ ಜಿಲ್ಲೆಯ ಶ್ರೀನಿವಾಸ್ ಎಂಬ ಇಬ್ಬರು ಯುವಕರನ್ನು ದುಬೈನಲ್ಲಿ ಬರ್ಬರವಾಗಿ ಹತ್ಯೆ ಮಾಡಿರುವುದು ಆಘಾತಕಾರಿ. ಈ ವಿಷಯದ ಬಗ್ಗೆ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರೊಂದಿಗೆ ಮಾತನಾಡಿದ್ದೇನೆ ಮತ್ತು ಅವರು ದುಃಖಿತ ಕುಟುಂಬಗಳಿಗೆ ಸಂಪೂರ್ಣ ಬೆಂಬಲ ಹಾಗೂ ಮೃತದೇಹಗಳನ್ನು ಶೀಘ್ರವಾಗಿ ತರಿಸಲು ಭರವಸೆ ನೀಡಿದ್ದಾರೆ” ಎಂದು ರೆಡ್ಡಿ ಟ್ವೀಟ್ ಮಾಡಿದ್ದಾರೆ.

ಈ ವಿಷಯದಲ್ಲಿ ತ್ವರಿತ ನ್ಯಾಯ ಒದಗಿಸಲು ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಕಾರ್ಯನಿರ್ವಹಿಸಲಿದೆ ಎಂದು ಅವರು ಹೇಳಿದ್ದಾರೆ. ಜೈಶಂಕರ್ ಅವರಿಗೆ ಅವರು ಧನ್ಯವಾದ ಅರ್ಪಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read