ಮಕ್ಕಳ ವಿದ್ಯಾಭ್ಯಾಸದ ಹಿತದೃಷ್ಟಿಯಿಂದ ಅವರ ಐಪ್ಯಾಡ್‌ಗಳನ್ನು ತೆಗೆದಿಟ್ಟ ಬ್ರಿಟನ್‌ನ ಶಿಕ್ಷಕಿಯೊಬ್ಬರು ಕಳ್ಳತನದ ಆರೋಪದ ಮೇಲೆ ಬಂಧನಕ್ಕೊಳಗಾಗಿರುವುದು ಮತ್ತು ಮಕ್ಕಳನ್ನು ಭೇಟಿಯಾಗದಂತೆ ನಿರ್ಬಂಧಕ್ಕೊಳಗಾಗಿರುವುದು ಅಚ್ಚರಿ ಮೂಡಿಸಿದೆ. ಗಾರ್ಡಿಯನ್ ವರದಿ ಮಾಡಿರುವ ಪ್ರಕಾರ, 50 ವರ್ಷದ ಇತಿಹಾಸ ಶಿಕ್ಷಕಿ ವನೆಸ್ಸಾ ಬ್ರೌನ್ ಅವರು ಮಾರ್ಚ್ 26 ರಂದು ಸುಮಾರು ಏಳು ಗಂಟೆಗಳ ಕಾಲ ಪೊಲೀಸ್ ಕಸ್ಟಡಿಯಲ್ಲಿ ಕಳೆದರು.
ತಮ್ಮ ಮಕ್ಕಳು ಓದಿನಲ್ಲಿ ಗಮನಹರಿಸಲಿ ಎಂಬ ಕಾರಣಕ್ಕೆ ಅವರ ಐಪ್ಯಾಡ್‌ಗಳನ್ನು ತೆಗೆದುಕೊಂಡು ಸರ್ರೆಯ ಕೋಬ್‌ಹ್ಯಾಮ್‌ನಲ್ಲಿರುವ ತಮ್ಮ ತಾಯಿಯ ಮನೆಯಲ್ಲಿಟ್ಟಿದ್ದಾಗಿ ಬ್ರೌನ್ ತಿಳಿಸಿದ್ದಾರೆ. ಆದರೆ, ಪೊಲೀಸರು ಅವರ ತಾಯಿಯ ಮನೆಗೆ ತೆರಳಿ ಐಪ್ಯಾಡ್‌ಗಳನ್ನು ವಶಪಡಿಸಿಕೊಂಡಾಗ ಪರಿಸ್ಥಿತಿ ಗಂಭೀರವಾಯಿತು. ಈ ಘಟನೆಯಿಂದ ತೀವ್ರ ಆಘಾತಕ್ಕೊಳಗಾಗಿರುವುದಾಗಿ ಬ್ರೌನ್ ಹೇಳಿದ್ದಾರೆ.
ಸರ್ರೆ ಪೊಲೀಸರ ಪ್ರಕಾರ, ಭದ್ರತಾ ಕಾಳಜಿಯ ಕುರಿತು ದೂರು ಬಂದ ಹಿನ್ನೆಲೆಯಲ್ಲಿ ಅವರು ಕೋಬ್‌ಹ್ಯಾಮ್‌ನ ವಿಳಾಸಕ್ಕೆ ಭೇಟಿ ನೀಡಿದ್ದರು. 40 ವರ್ಷದ ವ್ಯಕ್ತಿಯೊಬ್ಬರು ಐಪ್ಯಾಡ್‌ಗಳನ್ನು ಕಳವು ಮಾಡಲಾಗಿದೆ ಎಂದು ದೂರು ನೀಡಿದ್ದರು. ಪೊಲೀಸರು ಬ್ರೌನ್ ಅವರ ತಾಯಿಯ ಮನೆಗೆ ಹೋದಾಗ, ಬ್ರೌನ್ ಅವರು ಐಪ್ಯಾಡ್‌ಗಳ ಬಗ್ಗೆ ತಿಳಿದಿಲ್ಲ ಎಂದು ಹೇಳಿಕೆ ನೀಡಿದ್ದರಿಂದ ಅವರನ್ನು ಬಂಧಿಸಲಾಯಿತು. ನಂತರ ನಡೆಸಿದ ಹುಡುಕಾಟದಲ್ಲಿ ಐಪ್ಯಾಡ್‌ಗಳು ಪತ್ತೆಯಾದವು ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸಂಪೂರ್ಣ ಅನುಭವವು ತಮಗೆ ತೀವ್ರ ಬೇಸರವನ್ನುಂಟು ಮಾಡಿದೆ ಎಂದು ಬ್ರೌನ್ ಹೇಳಿದ್ದಾರೆ. ಅಧಿಕಾರಿಗಳು ತಮ್ಮ ವೃದ್ಧ ತಾಯಿಯೊಂದಿಗೆ ಅನುಚಿತವಾಗಿ ವರ್ತಿಸಿದರು ಎಂದು ಅವರು ಆರೋಪಿಸಿದ್ದಾರೆ. ಬಂಧನದ ನಂತರ ಬ್ರೌನ್ ಅವರನ್ನು ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು, ಅಲ್ಲಿ ಅವರ ಬೆರಳಚ್ಚು ಮತ್ತು ಭಾವಚಿತ್ರಗಳನ್ನು ಪಡೆಯಲಾಯಿತು. ಜಾಮೀನಿನ ಮೇಲೆ ಬಿಡುಗಡೆಯಾದ ನಂತರವೂ ತಮ್ಮ ಮಕ್ಕಳೊಂದಿಗೆ ಮಾತನಾಡಲು ಅವರಿಗೆ ಅವಕಾಶವಿರಲಿಲ್ಲ. ಪೊಲೀಸರು ತಮ್ಮ ಮಕ್ಕಳ ಶಾಲೆಗೆ ಭೇಟಿ ನೀಡಿ ವಿಚಾರಣೆ ನಡೆಸಿದರು ಎಂದು ಅವರು ತಿಳಿಸಿದ್ದಾರೆ.
ಮಾಜಿ ಪೊಲೀಸ್ ಮತ್ತು ಕ್ರೈಮ್ ಕಮಿಷನರ್ ಆಂಥೋನಿ ಸ್ಟಾನ್ಸ್‌ಫೆಲ್ಡ್ ಅವರು ಈ ಪ್ರಕರಣವನ್ನು ನಿರ್ವಹಿಸಿದ ಸರ್ರೆ ಪೊಲೀಸರ ಕ್ರಮವನ್ನು ಟೀಕಿಸಿದ್ದಾರೆ. ಇದು ಅಸಮರ್ಥತೆ ಮತ್ತು ಕೆಳ ಹಂತದ ಅಧಿಕಾರಿಗಳ ಅತಿಯಾದ ಉತ್ಸಾಹವೆಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಐಪ್ಯಾಡ್‌ಗಳು ಬ್ರೌನ್ ಅವರ ಮಕ್ಕಳಿಗೆ ಸೇರಿದ್ದು ಮತ್ತು ಅವುಗಳನ್ನು ತೆಗೆದುಕೊಳ್ಳಲು ಅವರಿಗೆ ಹಕ್ಕಿತ್ತು ಎಂದು ನಂತರ ಸರ್ರೆ ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಗಾರ್ಡಿಯನ್ ವರದಿಯ ಪ್ರಕಾರ, ಮರುದಿನವೇ ಪ್ರಕರಣವನ್ನು ಮುಚ್ಚಲಾಯಿತು ಮತ್ತು ಎಲ್ಲಾ ಜಾಮೀನು ಷರತ್ತುಗಳನ್ನು ಹಿಂಪಡೆಯಲಾಯಿತು.