Shocking Video; ವಾರಾಣಸಿಯಲ್ಲಿ SP ನಾಯಕನ ಮೇಲೆ ಮಾರಣಾಂತಿಕ ಹಲ್ಲೆ !

ವಾರಾಣಸಿ, ಉತ್ತರ ಪ್ರದೇಶ: ಸಮಾಜವಾದಿ ಪಕ್ಷದ (ಎಸ್ಪಿ) ನಾಯಕ ಹರೀಶ್ ಮಿಶ್ರಾ, ವಾರಾಣಸಿಯಲ್ಲಿ ಮಾರಣಾಂತಿಕ ಹಲ್ಲೆಗೆ ಒಳಗಾಗಿದ್ದಾರೆ. ಈ ಕೃತ್ಯವನ್ನು ಕರ್ಣಿ ಸೇನೆಯ ಬೆಂಬಲಿಗರು ಎಸಗಿದ್ದಾರೆ ಎಂದು ಶಂಕಿಸಲಾಗಿದೆ. ಹಲ್ಲೆಯ ನಂತರ ಸ್ಥಳದಲ್ಲಿ ಜಮಾಯಿಸಿದ ಜನರು ಇಬ್ಬರು ಆರೋಪಿಗಳನ್ನು ಹಿಡಿದು ಥಳಿಸಿದ್ದಾರೆ. ಗಾಯಗೊಂಡ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಘಟನೆಯ ದೃಶ್ಯಾವಳಿಗಳುಳ್ಳ ವಿಡಿಯೋ ತುಣುಕೊಂದು ಲಭ್ಯವಾಗಿದ್ದು, ಅದರಲ್ಲಿ ರಕ್ತಸಿಕ್ತ ಅಂಗಿಗಳೊಂದಿಗೆ ಆರೋಪಿಗಳು ಪೊಲೀಸ್ ವ್ಯಾನ್‌ನಲ್ಲಿ ಕುಳಿತಿರುವುದನ್ನು ಕಾಣಬಹುದು. ಪೊಲೀಸರು ಗಾಯಗೊಂಡ ಆರೋಪಿಗಳನ್ನು ಮೊದಲು ವೈದ್ಯಕೀಯ ಪರೀಕ್ಷೆಗೆ ಒಳಪಡಿಸುವುದಾಗಿ ಮಿಶ್ರಾ ಅವರಿಗೆ ತಿಳಿಸುತ್ತಿರುವುದು ವಿಡಿಯೋದಲ್ಲಿ ದಾಖಲಾಗಿದೆ. ಮತ್ತೊಂದು ವಿಡಿಯೋದಲ್ಲಿ ಹರೀಶ್ ಮಿಶ್ರಾ ಅವರು ಓರ್ವ ಹಲ್ಲೆಕೋರನ ಕುತ್ತಿಗೆ ಹಿಡಿದು ಪೊಲೀಸರಿಗೆ ಒಪ್ಪಿಸುತ್ತಿರುವುದು ಕಂಡುಬಂದಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ವಾರಾಣಸಿ ಪೊಲೀಸರು, ಹಲ್ಲೆಕೋರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಅಲ್ಲದೆ, ಹಲ್ಲೆಯಲ್ಲಿ ಎರಡೂ ಕಡೆಯವರಿಗೂ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಈ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. “ಬನಾರಸ್‌ನ ಮಿಶ್ರಾ ಜೀ ಎಂದೇ ಖ್ಯಾತರಾದ ಎಸ್ಪಿ ನಾಯಕ ಹರೀಶ್ ಮಿಶ್ರಾ ಅವರ ಮೇಲೆ ನಡೆದ ಮಾರಣಾಂತಿಕ ಚಾಕು ಹಲ್ಲೆ ಅತ್ಯಂತ ಖಂಡನೀಯ. ಅವರ ರಕ್ತಸಿಕ್ತ ಬಟ್ಟೆಗಳು ಉತ್ತರ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದಿರುವ ಸಂಕೇತವಾಗಿದೆ. ಇಂತಹ ಹಲ್ಲೆಗಳನ್ನು ಎದುರಿಸುವ ಶಕ್ತಿ ಪ್ರತಿಯೊಬ್ಬ ಎಸ್ಪಿ ಕಾರ್ಯಕರ್ತನಿಗೂ ಇದೆ” ಎಂದು ಅವರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. “ಈ ಘಟನೆಯ ನಂತರವಾದರೂ ಉತ್ತರ ಪ್ರದೇಶದ ನಿಷ್ಕ್ರಿಯ ಸರ್ಕಾರದಲ್ಲಿ ಏನಾದರೂ ಚಲನೆ ಕಂಡುಬರುತ್ತದೆಯೇ ನೋಡೋಣ” ಎಂದು ಅವರು ಪ್ರಶ್ನಿಸಿದ್ದಾರೆ.

ಇದಕ್ಕೂ ಮುನ್ನ, ಎಸ್ಪಿ ಸಂಸದ ರಾಮ್‌ಜಿ ಲಾಲ್ ಸುಮನ್, ರಾಣಾ ಸಂಗಾ ಕುರಿತು ನೀಡಿದ್ದ “ದೇಶದ್ರೋಹಿ” ಹೇಳಿಕೆಗೆ ಆಕ್ರೋಶಿತರಾದ ಕರ್ಣಿ ಸೇನೆಯ ಕಾರ್ಯಕರ್ತರು ಆಗ್ರಾದಲ್ಲಿ ಪ್ರತಿಭಟನೆ ನಡೆಸಿದ್ದರು. ರಾಣಾ ಸಂಗಾ ಅವರ ಜನ್ಮದಿನದಂದು ನಡೆದ ಈ ಪ್ರತಿಭಟನೆಯಲ್ಲಿ ಖಡ್ಗ ಮತ್ತು ದೊಣ್ಣೆಗಳನ್ನು ಹಿಡಿದು ಪೊಲೀಸರನ್ನು ಸುತ್ತುವರೆದಿದ್ದ ದೃಶ್ಯಗಳು ಕಂಡುಬಂದಿದ್ದವು.

ಕಳೆದ ತಿಂಗಳು ಸಂಸತ್ತಿನಲ್ಲಿ ಮಾತನಾಡಿದ್ದ ಎಸ್ಪಿ ಸಂಸದ ರಾಮ್‌ಜಿ ಲಾಲ್ ಸುಮನ್, “ಬಿಜೆಪಿ ನಾಯಕರು ಮುಸ್ಲಿಮರಿಗೆ ಬಾಬರ್‌ನ ಡಿಎನ್‌ಎ ಇದೆ ಎಂದು ಹೇಳುತ್ತಾರೆ. ಆದರೆ ಭಾರತೀಯ ಮುಸ್ಲಿಮರು ಬಾಬರ್‌ನನ್ನು ತಮ್ಮ ಆದರ್ಶವೆಂದು ಪರಿಗಣಿಸುವುದಿಲ್ಲ. ವಾಸ್ತವವಾಗಿ, ಬಾಬರ್‌ನನ್ನು ಭಾರತಕ್ಕೆ ಕರೆತಂದವರು ಯಾರು? ಇಬ್ರಾಹಿಂ ಲೋಧಿಯನ್ನು ಸೋಲಿಸಲು ರಾಣಾ ಸಂಗಾ ಆತನನ್ನು ಆಹ್ವಾನಿಸಿದ್ದರು. ಆ ಕಥೆಯಿಂದ, ನೀವು ಮುಸ್ಲಿಮರು ಬಾಬರ್‌ನ ವಂಶಸ್ಥರು ಎಂದು ಹೇಳುವುದಾದರೆ, ನೀವು ಸಹ ರಾಣಾ ಸಂಗಾ – ಒಬ್ಬ ದೇಶದ್ರೋಹಿಯ ವಂಶಸ್ಥರಾಗುತ್ತೀರಿ. ನಾವು ಬಾಬರ್‌ನನ್ನು ಟೀಕಿಸುತ್ತೇವೆ, ಆದರೆ ರಾಣಾ ಸಂಗಾರನ್ನು ಅಲ್ಲ” ಎಂದು ಹೇಳಿದ್ದರು. ಈ ಹೇಳಿಕೆಯೇ ಹಲ್ಲೆಗೆ ಕಾರಣವಾಗಿರಬಹುದು ಎಂದು ಅಂದಾಜಿಸಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read