ದೇಹಕ್ಕೆ ಕೊಲೆಸ್ಟ್ರಾಲ್ ಅತ್ಯಗತ್ಯವಾದರೂ, ಅದರ ಪ್ರಮಾಣ ಮೀರಿದರೆ ಆರೋಗ್ಯಕ್ಕೆ ಮಾರಕವಾಗಬಹುದು. ಅದರಲ್ಲೂ ಕೆಟ್ಟ ಕೊಲೆಸ್ಟ್ರಾಲ್ (ಎಲ್‌ಡಿಎಲ್) ಹೆಚ್ಚಾದರೆ ಹೃದಯಾಘಾತ, ರಕ್ತನಾಳಗಳ blockage (ಅಡೆತಡೆ), ಪಾರ್ಶ್ವವಾಯು ಸೇರಿದಂತೆ ಅನೇಕ ಗಂಭೀರ ಸಮಸ್ಯೆಗಳು ಕಾಡುವ ಅಪಾಯವಿದೆ. ಹೀಗಾಗಿ, ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಬಹಳ ಮುಖ್ಯ. ಇದನ್ನು ಮಾಡಲು, ದೇಹದಲ್ಲಿ ಕಾಣಿಸಿಕೊಳ್ಳುವ ಕೆಲವು ಲಕ್ಷಣಗಳ ಬಗ್ಗೆ ಗಮನಹರಿಸುವುದು ಅಗತ್ಯ. ಕೊಲೆಸ್ಟ್ರಾಲ್ ಹೆಚ್ಚಾದಾಗ ದೇಹದ ಯಾವ ಭಾಗಗಳಲ್ಲಿ ನೋವು ಕಾಣಿಸಿಕೊಳ್ಳಬಹುದು ಎಂಬುದನ್ನು ತಿಳಿಯೋಣ.
ಕಾಲು ನೋವು ಮತ್ತು ಸೆಳೆತ: ದೇಹದಲ್ಲಿ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಾದಾಗ ಕಾಲುಗಳಲ್ಲಿ ನೋವು ಮತ್ತು ಸೆಳೆತ ಕಾಣಿಸಿಕೊಳ್ಳುವುದು ಸಾಮಾನ್ಯ. ಏಕೆಂದರೆ, ಕೊಲೆಸ್ಟ್ರಾಲ್ ರಕ್ತನಾಳಗಳಲ್ಲಿ ಸಂಗ್ರಹವಾಗುವುದರಿಂದ ರಕ್ತದ ಹರಿವು ಕಡಿಮೆಯಾಗುತ್ತದೆ. ಇದರಿಂದಾಗಿ ನಡೆಯುವಾಗ ಅಥವಾ ವಿಶ್ರಾಂತಿ ಪಡೆಯುವಾಗ ಕಾಲುಗಳಲ್ಲಿ ತೀವ್ರ ನೋವು, ಭಾರ ಅಥವಾ ಸೆಳೆತದ ಅನುಭವವಾಗಬಹುದು. ಇಂತಹ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ ಪರೀಕ್ಷಿಸಿಕೊಳ್ಳುವುದು ಸೂಕ್ತ.
ಎದೆ ನೋವು ಅಥವಾ ಒತ್ತಡ: ಎದೆ ನೋವು ಅಥವಾ ಒತ್ತಡದ ಅನುಭವವು ಕೊಲೆಸ್ಟ್ರಾಲ್ ಹೆಚ್ಚಳದ ಗಂಭೀರ ಲಕ್ಷಣಗಳಲ್ಲಿ ಒಂದು. ಹೃದಯದ ಅಪಧಮನಿಗಳಲ್ಲಿ ಕೊಲೆಸ್ಟ್ರಾಲ್ ಶೇಖರಣೆಯಾಗುವುದರಿಂದ ಎದೆಯಲ್ಲಿ ಒತ್ತಡ ಉಂಟಾಗುತ್ತದೆ. ಇದು ಉರಿ ಅಥವಾ ಬಿಗಿತದ ಭಾವನೆಗೆ ಕಾರಣವಾಗಬಹುದು. ಈ ಲಕ್ಷಣಗಳು ಹೃದಯಾಘಾತ ಅಥವಾ ಪರಿಧಮನಿಯ ಕಾಯಿಲೆಯ (CAD) ಮುನ್ಸೂಚನೆಯಾಗಿರಬಹುದು.
ಕುತ್ತಿಗೆ, ದವಡೆ ಅಥವಾ ಭುಜದಲ್ಲಿ ನೋವು: ಕೊಲೆಸ್ಟ್ರಾಲ್ ಹೆಚ್ಚಾದಾಗ ಕುತ್ತಿಗೆಯ ಸುತ್ತಲೂ ನೋವು ಕಾಣಿಸಿಕೊಳ್ಳಬಹುದು. ದೇಹದಾದ್ಯಂತ ರಕ್ತದ ಹರಿವು ಅಡಚಣೆಯಾಗುವುದರಿಂದ ಕುತ್ತಿಗೆ, ದವಡೆ ಮತ್ತು ಭುಜಗಳಲ್ಲಿ ಅಸಹಜ ನೋವು ಉಂಟಾಗಬಹುದು. ಇದು ಹೆಚ್ಚಾಗಿ ಒತ್ತಡ ಅಥವಾ ಸ್ನಾಯು ನೋವಿನಂತೆ ಭಾಸವಾಗುತ್ತದೆ.
ಇತರ ಲಕ್ಷಣಗಳು: ಇವುಗಳಲ್ಲದೆ, ಕೊಲೆಸ್ಟ್ರಾಲ್ ಹೆಚ್ಚಾದಾಗ ಕೈ ಮತ್ತು ಕಾಲುಗಳಲ್ಲಿ ಮರಗಟ್ಟುವಿಕೆ, ಜುಮ್ಮೆನಿಸುವಿಕೆ ಅಥವಾ ಶೀತದ ಅನುಭವವಾಗಬಹುದು. ಕೆಲವು ಸಂದರ್ಭಗಳಲ್ಲಿ ಕಾಲುಗಳ ಬಣ್ಣ ನೀಲಿ ಬಣ್ಣಕ್ಕೆ ತಿರುಗಿದಂತೆ ಕಾಣಿಸಬಹುದು. ತಲೆ ಭಾರವಾಗುವುದು ಅಥವಾ ತಲೆತಿರುಗುವಿಕೆ, ಮೆಟ್ಟಿಲುಗಳನ್ನು ಹತ್ತುವಾಗ ಉಸಿರಾಟದ ತೊಂದರೆ ಅಥವಾ ಸುಸ್ತು, ಕಣ್ಣುಗಳ ಸುತ್ತ ಹಳದಿ ಬಣ್ಣ ಅಥವಾ ಹಳದಿ ಉಂಗುರದಂತಹ ಗುರುತುಗಳು ಕಾಣಿಸಿಕೊಳ್ಳಬಹುದು.
ನಿಮ್ಮ ದೇಹದಲ್ಲಿ ಇಂತಹ ಯಾವುದೇ ಬದಲಾವಣೆಗಳನ್ನು ಗಮನಿಸಿದರೆ, ತಕ್ಷಣ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆ ಪಡೆಯುವುದು ಆರೋಗ್ಯದ ದೃಷ್ಟಿಯಿಂದ ಬಹಳ ಮುಖ್ಯ.