ಕೋಲ್ಕತ್ತಾದಿಂದ ಮುಂಬೈಗೆ ತೆರಳುತ್ತಿದ್ದ ಗೀತಾಂಜಲಿ ಎಕ್ಸ್‌ಪ್ರೆಸ್‌ನಲ್ಲಿ ಅಮಾನವೀಯ ಘಟನೆಯೊಂದು ನಡೆದಿದೆ. ಆಹಾರದ ಗುಣಮಟ್ಟ ಹಾಗೂ ಬೆಲೆಯ ಬಗ್ಗೆ ದೂರು ನೀಡಿದ ಪ್ರಯಾಣಿಕರೊಬ್ಬರ ಮೇಲೆ ಐಆರ್‌ಸಿಟಿಸಿ ಪ್ಯಾಂಟ್ರಿ ಸಿಬ್ಬಂದಿ ಹಲ್ಲೆ ನಡೆಸಿ, ಅವರನ್ನು ಒತ್ತೆಯಾಳಾಗಿರಿಸಿಕೊಂಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಈ ಘಟನೆಯು ಏಪ್ರಿಲ್ 6 ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಅಂಬರನಾಥದ ಸಮಾಜ ಸೇವಕ ಸತ್ಯಜಿತ್ ಬರ್ಮನ್ ಅವರು ಪ್ರಯಾಣಿಕರಿಗೆ ಸಹಾಯ ಮಾಡಲು ಮುಂದಾದಾಗ ಈ ದುರ್ಘಟನೆ ಸಂಭವಿಸಿದೆ. ಪ್ರಯಾಣಿಕರು, ನೀಡುತ್ತಿದ್ದ ಆಹಾರದ ಪ್ರಮಾಣ ಕಡಿಮೆ ಇದ್ದು, ಬೆಲೆ ಹೆಚ್ಚಾಗಿದೆ ಎಂದು ದೂರಿದ್ದರು. ಇದನ್ನು ಪ್ರಶ್ನಿಸಿದ ಬರ್ಮನ್ ಅವರನ್ನು ಪ್ಯಾಂಟ್ರಿ ಬೋಗಿಯೊಳಗೆ ಸಿಬ್ಬಂದಿ ಸುತ್ತುವರೆದು ಹಲ್ಲೆ ನಡೆಸಿದ್ದಾರೆ. ಅಷ್ಟೇ ಅಲ್ಲದೆ, ರೈಲ್ವೆ ಸಂರಕ್ಷಣಾ ಪಡೆ (ಆರ್‌ಪಿಎಫ್) ಬಂದು ರಕ್ಷಿಸುವವರೆಗೂ ಅವರನ್ನು ಒಂದು ಗಂಟೆಗೂ ಹೆಚ್ಚು ಕಾಲ ಒತ್ತೆಯಾಳಾಗಿ ಇರಿಸಿಕೊಂಡಿದ್ದರು ಎಂದು ಆರೋಪಿಸಲಾಗಿದೆ.
ಈ ಸಂಬಂಧ ಸತ್ಯಜಿತ್ ಬರ್ಮನ್ , ಕಲ್ಯಾಣ ಸರ್ಕಾರಿ ರೈಲ್ವೆ ಪೊಲೀಸರಿಗೆ (ಜಿಆರ್‌ಪಿ) ದೂರು ನೀಡಿದ್ದು, ರಂಜಿತ್ ಬೆಹೆರಾ, ಸುಮನ್ ಕರಣ್ ಸೇರಿದಂತೆ ಏಳು ಐಆರ್‌ಸಿಟಿಸಿ ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಘಟನೆ ಬಡ್ನೇರಾ ಜಿಆರ್‌ಪಿ ವ್ಯಾಪ್ತಿಯಲ್ಲಿ ನಡೆದ ಕಾರಣ, ಹೆಚ್ಚಿನ ತನಿಖೆಗಾಗಿ ಪ್ರಕರಣವನ್ನು ಅಲ್ಲಿಗೆ ವರ್ಗಾಯಿಸಲಾಗಿದೆ.
ಘಟನೆಯ ಬಗ್ಗೆ ವಿವರಿಸಿದ ಬರ್ಮನ್, ತಾವು ಕೋಲ್ಕತ್ತಾದಿಂದ ಮುಂಬೈಗೆ ಪ್ರಯಾಣಿಸುತ್ತಿದ್ದಾಗ, ಬಡ್ನೇರಾ ಸಮೀಪಿಸುತ್ತಿದ್ದಾಗ ಮೂವರು ಪ್ರಯಾಣಿಕರು ಹಾಗೂ ಪ್ಯಾಂಟ್ರಿ ಸಿಬ್ಬಂದಿ ನಡುವೆ ವಾಗ್ವಾದ ನಡೆಯುತ್ತಿರುವುದನ್ನು ಗಮನಿಸಿದೆ. ಪ್ರಯಾಣಿಕರು, ನೀಡುತ್ತಿದ್ದ ಆಹಾರದ ತೂಕ ಕಡಿಮೆ ಇದ್ದು, ಬೆಲೆ ಹೆಚ್ಚಾಗಿದೆ ಎಂದು ದೂರಿದ್ದರು. ಇದನ್ನು ಪ್ರಶ್ನಿಸಿದ್ದಕ್ಕೆ ಪ್ಯಾಂಟ್ರಿ ವ್ಯವಸ್ಥಾಪಕರು ತಮ್ಮನ್ನು ತರಾಟೆಗೆ ತೆಗೆದುಕೊಂಡು, ಮೊಬೈಲ್ ಕಸಿದುಕೊಂಡು ಹಲ್ಲೆ ನಡೆಸಿದರು ಎಂದು ಬರ್ಮನ್ ಆರೋಪಿಸಿದ್ದಾರೆ. ಅಲ್ಲದೆ, ಇತರ ಸಿಬ್ಬಂದಿ ಪ್ರಯಾಣಿಕರಿಗೂ ಬೆದರಿಕೆ ಹಾಕಿ, ಕೆಲವರನ್ನು ಹೊಡೆದು ಬೋಗಿಗೆ ಕಳುಹಿಸಿದರು ಎಂದು ತಿಳಿಸಿದ್ದಾರೆ.
ಪ್ಯಾಂಟ್ರಿಯಿಂದ ತಪ್ಪಿಸಿಕೊಂಡ ಪ್ರಯಾಣಿಕರಲ್ಲೊಬ್ಬರು ಆರ್‌ಪಿಎಫ್ ಸಹಾಯವಾಣಿಗೆ ಕರೆ ಮಾಡಿದ್ದರಿಂದ, ತಕ್ಷಣ ಕಾರ್ಯಪ್ರವೃತ್ತರಾದ ಆರ್‌ಪಿಎಫ್ ಸಿಬ್ಬಂದಿ ಬರ್ಮನ್ ಅವರನ್ನು ರಕ್ಷಿಸಿದ್ದಾರೆ. ಈ ಘಟನೆಯನ್ನು ರೈಲ್ವೆ ಕಾರ್ಯಕರ್ತ ಸಮೀರ್ ಜಾವೇರಿ ತೀವ್ರವಾಗಿ ಖಂಡಿಸಿದ್ದು, ಐಆರ್‌ಸಿಟಿಸಿ ಗುತ್ತಿಗೆದಾರರು ಪ್ರಯಾಣಿಕರನ್ನು ಲೂಟಿ ಮಾಡುತ್ತಿದ್ದಾರೆ ಮತ್ತು ಇದರ ವಿರುದ್ಧ ಧ್ವನಿ ಎತ್ತಿದವರ ಮೇಲೆ ಹಲ್ಲೆ ನಡೆಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
A passenger on Gitanjali Express was assaulted by @IRCTCofficial staff after he complained about food and water bottles being sold above the MRP. The incident occurred between #Badnera and #Nagpur.#ViralVideos#IndianRailways #CrimeNews #NagpurViolence pic.twitter.com/92M1xwE8NF
— Mumbai Tez News (@mumbaitez) April 11, 2025