ಚಿತ್ರದುರ್ಗ: ಕೋಟೆ ನಾಡು ಚಿತ್ರದುರ್ಗದಲ್ಲಿ ದಿನದಿಂದ ದಿನಕ್ಕೆ ರಣ ಬಿಸಿಲು ಹೆಚ್ಚಾಗುತ್ತಿದೆ. ಕೆಲವೆಡೆ ಆಲಿಕಲ್ಲು ಮಳೆಯಾಗಿದ್ದರೂ ಬಿಸಿಲ ಧಗೆ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಅರಣ್ಯ ಇಲಾಖೆ ಕೆಲ ಪ್ರದೇಶಗಳಲ್ಲಿ ಪ್ರವಾಸಿಗರಿಗೆ ನಿಷೇಧ ಹೇರಿದೆ.
ಚಿತ್ರದುರ್ಗದ ಊಟಿ ಎಂದೇ ಖ್ಯಾತಿ ಪಡೆದಿರುವ ಜೋಗಿಮಟ್ಟಿ ವನ್ಯಧಾಮಕ್ಕೆ ಜೂನ್ ವರೆಗೂ ಪ್ರವಾಸಿಗರಿಗೆ ನಿರ್ಬಂಧ ವಿಧಿಸಲಾಗಿದೆ. ಕುರುಚಲು ಕಾಡು ಹೊಂದಿರುವ ವನ್ಯಧಾಮದಲ್ಲಿ ರಣಬಿಸಿಲಿನಿಂದಾಗಿ ಮರಗಿಡಗಳು, ಹಸಿರು ಒಣಗು ಹೋಗಿವೆ. ಮರಗಳು ಒಣಗಿ ಬಿಸಿಲಿನಿಂದಾಗಿ ಕಪ್ಪುಬಣ್ಣಕ್ಕೆ ತಿರುಗುತ್ತಿವೆ. ಬೆಂಕಿ ಅವಘಡದ ಅಪಾಯವಿರುವ ಸದಹ್ಯತೆ ಹಿನ್ನೆಲೆಯಲ್ಲಿ ಹಾಗೂ ಪ್ರಾಣಿ-ಪಕ್ಷಿ, ವನ್ಯಜೀವಿಗಳ ಸಂರಕ್ಷಣೆ ನಿಟ್ಟಿನಲ್ಲಿ ನಿಷೇಧ ವಿಧಿಸಲಾಗಿದೆ.
ಜೋಗಿಮಟ್ಟಿ ವನ್ಯಧಾಮದಲ್ಲಿ ಪ್ರವಾಸಿಗರು, ವಾಯುವಿಹಾರಿಗಳಿಗೂ ಜೂನ್ ವರೆಗೂ ನಿರ್ಬಂಧ ವಿಧಿಸಲಾಗಿದೆ. ಜೂನ್ ವೇಳೆಗೆ ಮಳೆ ಆರಂಭವಾಗುವುದರಿಂದ ಜೋಗಿಮಟ್ಟಿ ಪ್ರವೇಶಕ್ಕೆ ಅವಕಾಶ ನೀಡಲಾಗುವುದು ಎಂದು ವಲಯ ಅರಣ್ಯಾಧಿಕಾರಿ ವಸಂತ್ ಕುಮಾರ್ ತಿಳಿಸಿದ್ದಾರೆ.