15 ವರ್ಷಗಳ ಸೇಡು: ತಂದೆಯ ಕೊಂದವನಿಗೆ ಅದೇ ಜಾಗದಲ್ಲಿ ಮಕ್ಕಳಿಂದ ಮರಣ ದಂಡನೆ !

ಉತ್ತರ ಪ್ರದೇಶದ ಹರ್ದೋಯ್ ಜಿಲ್ಲೆಯಲ್ಲಿ ನಡೆದ ಒಂದು ರೋಚಕ ಮತ್ತು ಭಯಾನಕ ಘಟನೆಯಲ್ಲಿ, 15 ವರ್ಷಗಳ ಹಿಂದೆ ನಡೆದ ಕೊಲೆ ಪ್ರಕರಣದ ಅಪರಾಧಿಯನ್ನು ಬಲಿಪಶುವಿನ ಮಕ್ಕಳೇ ಸೇರಿಕೊಂಡು ಗುಂಪಿನಿಂದ ಹೊಡೆದು ಕೊಂದಿದ್ದಾರೆ. ಬೆನಿಗಂಜ್ ಪಟ್ಟಣದಲ್ಲಿ ಸಾರ್ವಜನಿಕವಾಗಿ ನಡೆದ ಈ ಘಟನೆ, ಮೊದಲ ಕೊಲೆಯನ್ನೇ ಹೋಲುವ ರೀತಿಯಲ್ಲಿ ನಡೆದಿದ್ದು, ಸಿಸಿ ಟಿವಿಯಲ್ಲಿ ದಾಖಲಾಗಿದೆ.

ಮೃತ ಮಹಾವತ್ ಎಂಬಾತನು 2009 ರಲ್ಲಿ ರಾಂಪಾಲ್ ಎಂಬ ವ್ಯಕ್ತಿಯನ್ನು ಸಣ್ಣ ಹಣಕಾಸಿನ ವಿಚಾರಕ್ಕೆ ಕೋಲುಗಳಿಂದ ಹೊಡೆದು ಕೊಂದಿದ್ದ. ಈ ಪ್ರಕರಣದಲ್ಲಿ 15 ವರ್ಷಗಳ ಶಿಕ್ಷೆ ಅನುಭವಿಸಿ ಇತ್ತೀಚೆಗಷ್ಟೇ ಜೈಲಿನಿಂದ ಬಿಡುಗಡೆಯಾಗಿದ್ದನು. ರಾಂಪಾಲ್‌ನ ಮಕ್ಕಳಾದ ರಾಹುಲ್ ಮತ್ತು ಬೀರು, ಆಗ ಕೇವಲ 12 ಮತ್ತು 10 ವರ್ಷದವರಾಗಿದ್ದರು. ಈಗ ಪ್ರಾಯಸ್ಥರಾಗಿರುವ ಈ ಸಹೋದರರು, ತಮ್ಮ ತಂದೆಯನ್ನು ಎಲ್ಲಿ ಕೊಲ್ಲಲಾಗಿತ್ತೋ ಅದೇ ಸ್ಥಳದಲ್ಲಿ ಸುಮಾರು 30 ಜನರ ಗುಂಪನ್ನು ಸಂಘಟಿಸಿ ಮಹಾವತ್‌ನನ್ನು ನಿರ್ದಯವಾಗಿ ಕೊಂದಿದ್ದಾರೆ ಎಂದು ವರದಿಯಾಗಿದೆ. ಮಹಿಳೆಯರು ಕೂಡ ಈ ಸೇಡಿನ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.

ಪೊಲೀಸರು ಸ್ಥಳಕ್ಕೆ ಧಾವಿಸಿ ಗುಂಪನ್ನು ನಿಯಂತ್ರಿಸುವಷ್ಟರಲ್ಲಿ ಮಹಾವತ್ ಮೃತಪಟ್ಟಿದ್ದ. ಬಂಧಿತ ಆರೋಪಿಗಳು, “ಅವರು ನಮ್ಮ ತಂದೆಗೆ ಹೇಗೆ ಹೊಡೆದು ಕೊಂದರೋ, ನಾವು ಕೂಡ ಹಾಗೆಯೇ ಮಾಡಿದ್ದೇವೆ” ಎಂದು ಯಾವುದೇ ಪಶ್ಚಾತ್ತಾಪವಿಲ್ಲದೆ ಹೇಳಿಕೆ ನೀಡಿದ್ದಾರೆ. ಘಟನೆಯಲ್ಲಿ ಭಾಗಿಯಾಗಿದ್ದ ಕೆಲವು ಮಹಿಳೆಯರು ಕೂಡ ಈ ಕೃತ್ಯವನ್ನು ಸಮರ್ಥಿಸಿಕೊಂಡಿದ್ದಾರೆ. ಪೊಲೀಸರು ಈವರೆಗೆ 18 ಜನರನ್ನು ಬಂಧಿಸಿದ್ದು, ಹೆಚ್ಚಿನ ತನಿಖೆ ಮುಂದುವರೆದಿದೆ.

2009 ರಲ್ಲಿ ಕೊಲೆ ಮಾಡಿದಾಗ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಮಹಾವತ್, ಬಿಡುಗಡೆಯಾದ ನಂತರ ಲಖಿಂಪುರ ಜಿಲ್ಲೆಯಲ್ಲಿ ವಾಸಿಸುತ್ತಿದ್ದ. ಆದರೆ ಬೆನಿಗಂಜ್‌ಗೆ ಭೇಟಿ ನೀಡಿದ್ದು ಆತನಿಗೆ ದುರಂತ ಅಂತ್ಯವನ್ನು ತಂದಿದೆ. 15 ವರ್ಷಗಳ ಕಾಲ ಹೊತ್ತಿ ಉರಿದ ಸೇಡಿನ ಜ್ವಾಲೆ ಕೊನೆಗೂ ತಣ್ಣಗಾಗಿದ್ದು, ಈ ಘಟನೆ ಸ್ಥಳೀಯರಲ್ಲಿ ಆಘಾತವನ್ನುಂಟು ಮಾಡಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read