ಕೇಂದ್ರ ಸಚಿವ ಜಿತನ್ ರಾಮ್ ಮಾಂಝಿ ಅವರ ಮೊಮ್ಮಗಳು ಸುಷ್ಮಾ ದೇವಿ (ಹೆಸರು ಬದಲಿಸಲಾಗಿದೆ) ಅವರನ್ನು ಅವರ ಪತಿಯೇ ಗುಂಡಿಕ್ಕಿ ಕೊಂದಿರುವ ಆಘಾತಕಾರಿ ಘಟನೆ ಬಿಹಾರದ ಗಯಾದಲ್ಲಿ ಬುಧವಾರ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅತ್ರಿ ಬ್ಲಾಕ್ನ ಟೆಟುವಾ ಗ್ರಾಮದಲ್ಲಿ ಸುಷ್ಮಾ ದೇವಿ ತಮ್ಮ ಮಕ್ಕಳು ಮತ್ತು ಸಹೋದರಿ ಪೂನಂ ಕುಮಾರಿ ಅವರೊಂದಿಗೆ ಮನೆಯಲ್ಲಿದ್ದಾಗ ಈ ದುರಂತ ಸಂಭವಿಸಿದೆ.
ಗಯಾ ಲೋಕಸಭಾ ಕ್ಷೇತ್ರದ ಸಂಸದರೂ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವರೂ ಆಗಿರುವ ಜಿತಿನ್ ರಾಮ್ ಮಾಂಝಿ, ಈ ಘಟನೆಯ ಬಗ್ಗೆ ತಕ್ಷಣಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಅವರು ಬಿಹಾರದಲ್ಲಿ ಆಡಳಿತಾರೂಢ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ (ಎನ್ಡಿಎ) ಮಿತ್ರಪಕ್ಷವಾದ ಹಿಂದೂಸ್ತಾನಿ ಅವಾಮ್ ಮೋರ್ಚಾ (ಸೆಕ್ಯುಲರ್) ದ ಸಂಸ್ಥಾಪಕರೂ ಆಗಿದ್ದಾರೆ.
ಪೂನಂ ಅವರ ಪ್ರಕಾರ, ಮಧ್ಯಾಹ್ನ 12 ಗಂಟೆ ಸುಮಾರಿಗೆ ಕೆಲಸದಿಂದ ಮನೆಗೆ ಮರಳಿದ ನಂತರ ಸುಷ್ಮಾ ಮತ್ತು ಆಕೆಯ ಪತಿ ರಮೇಶ್ ನಡುವೆ ಜಗಳ ನಡೆದಿದೆ. ಜಗಳದ ತಾರಕಕ್ಕೇರಿದಾಗ ರಮೇಶ್ ಕಚ್ಚಾ ಪಿಸ್ತೂಲನ್ನು ತೆಗೆದು ಸುಷ್ಮಾ ಮೇಲೆ ಗುಂಡು ಹಾರಿಸಿ ಸ್ಥಳದಿಂದ ಪರಾರಿಯಾಗಿದ್ದಾನೆ.
ಬೇರೆ ಕೋಣೆಯಲ್ಲಿದ್ದ ಸುಷ್ಮಾ ಅವರ ಮಕ್ಕಳು ಗುಂಡಿನ ಸದ್ದು ಕೇಳಿ ತಕ್ಷಣವೇ ಆಕೆಯ ಕೋಣೆಯತ್ತ ಧಾವಿಸಿದಾಗ, ಆಕೆ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡುಬಂದಿದೆ. ಸುಷ್ಮಾ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
“ಅವನು ಪಾಟ್ನಾದಿಂದ ಬಂದಿದ್ದ. ರಮೇಶ್ಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ನಾವು ಆಗ್ರಹಿಸುತ್ತೇವೆ. ನನ್ನ ಸಹೋದರಿಯನ್ನು ಕೊಂದಿದ್ದಕ್ಕಾಗಿ ಅವನನ್ನು ನೇಣಿಗೇರಿಸಬೇಕು. ನನ್ನ ಸಹೋದರಿ ಇನ್ನಿಲ್ಲ,” ಎಂದು ಪೂನಂ ತಮ್ಮ ದುಃಖವನ್ನು ವ್ಯಕ್ತಪಡಿಸಿದ್ದಾರೆ. ಗುಂಡಿನ ಸದ್ದು ಕೇಳಿದ ತಕ್ಷಣ ಸ್ಥಳೀಯ ನಿವಾಸಿಗಳು ಕೂಡ ಮನೆಗೆ ಧಾವಿಸಿದ್ದರು.
ಸುಷ್ಮಾ ಅವರು ಬಿಹಾರ ಮಹಾದಲಿತ ವಿಕಾಸ್ ಮಿಷನ್ ಅಡಿಯಲ್ಲಿ ರಾಜ್ಯ ಸರ್ಕಾರ ಮತ್ತು ಸಮಾಜದ ನಡುವೆ ಅಭಿವೃದ್ಧಿ ಉಪಕ್ರಮಗಳಿಗಾಗಿ ಸಂಪರ್ಕ ಕೊಂಡಿಯಾಗಿ ಕಾರ್ಯನಿರ್ವಹಿಸುವ “ವಿಕಾಸ್ ಮಿತ್ರ”ರಾಗಿ ಕೆಲಸ ಮಾಡುತ್ತಿದ್ದರು. ರಮೇಶ್ ಪಾಟ್ನಾದಲ್ಲಿ ಟ್ರಕ್ ಚಾಲಕನಾಗಿ ಕೆಲಸ ಮಾಡುತ್ತಿದ್ದ.
ಗಯಾ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್ಎಸ್ಪಿ) ಆನಂದ್ ಕುಮಾರ್ ಅವರು ಆರೋಪಿಯನ್ನು ಪತ್ತೆ ಹಚ್ಚಲು ವಿಶೇಷ ತಂಡವನ್ನು ರಚಿಸಲಾಗಿದೆ ಎಂದು ತಿಳಿಸಿದ್ದಾರೆ. “ನ್ಯಾಯ ವಿಜ್ಞಾನ ತಂಡ ಮತ್ತು ತಾಂತ್ರಿಕ ತಜ್ಞರನ್ನು ಅಪರಾಧ ನಡೆದ ಸ್ಥಳಕ್ಕೆ ಸಾಕ್ಷ್ಯ ಸಂಗ್ರಹಿಸಲು ಕಳುಹಿಸಲಾಗಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ,” ಎಂದು ಅವರು ಹೇಳಿದ್ದಾರೆ.
ಮೂಲಗಳ ಪ್ರಕಾರ, ಸುಷ್ಮಾ ಮತ್ತು ರಮೇಶ್ ಬೇರೆ ಬೇರೆ ಜಾತಿಗಳಿಗೆ ಸೇರಿದವರಾಗಿದ್ದು, 14 ವರ್ಷಗಳ ಹಿಂದೆ ವಿವಾಹವಾಗಿದ್ದರು.