‌BIG NEWS: ಕ್ಯೂಆರ್ ಕೋಡ್, ಫೇಸ್ ಐಡಿ ; ಹೊಸ ಆಪ್‌ ನಿಂದ ʼಆಧಾರ್ʼ ಸೇವೆ ಇನ್ನಷ್ಟು ಸುಲಭ | Watch

ಭಾರತದ ಪ್ರತಿಯೊಬ್ಬ ನಾಗರಿಕನ ಗುರುತಿನ ಚೀಟಿಯಾದ ಆಧಾರ್ ಅನ್ನು ಇನ್ನಷ್ಟು ಸುಲಭವಾಗಿ ಹಾಗೂ ಸುರಕ್ಷಿತವಾಗಿ ಬಳಸಲು ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆಯಿಟ್ಟಿದೆ. ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರು ಮಂಗಳವಾರ ನೂತನ ಆಧಾರ್ ಮೊಬೈಲ್ ಅಪ್ಲಿಕೇಶನ್ ಅನ್ನು ಬಿಡುಗಡೆಗೊಳಿಸಿದ್ದು, ಇದು ಆಧಾರ್ ಸೇವೆಗಳನ್ನು ಕೇವಲ ಬೆರಳ ತುದಿಯಲ್ಲಿ ಲಭ್ಯವಾಗಿಸಲಿದೆ.

ಈ ನೂತನ ಆ್ಯಪ್ ಮುಖ ಗುರುತಿಸುವಿಕೆ (ಫೇಸ್ ಐಡಿ) ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆ (ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ – ಎಐ) ಯನ್ನು ಸಂಯೋಜಿಸಿದ್ದು, ಡಿಜಿಟಲ್ ಆಧಾರ್ ಸೇವೆಯನ್ನು ನೇರವಾಗಿ ಮೊಬೈಲ್ ಮೂಲಕವೇ ಪಡೆಯಲು ಅನುಕೂಲವಾಗಲಿದೆ. ಈ ಕುರಿತು ಟ್ವಿಟರ್‌ನಲ್ಲಿ ವಿಡಿಯೋ ಹಂಚಿಕೊಂಡಿರುವ ಸಚಿವ ಅಶ್ವಿನಿ ವೈಷ್ಣವ್, “ಹೊಸ ಆಧಾರ್ ಆ್ಯಪ್ – ಮೊಬೈಲ್ ಆ್ಯಪ್ ಮೂಲಕ ಫೇಸ್ ಐಡಿ ದೃಢೀಕರಣ. ಇನ್ನು ಮುಂದೆ ಭೌತಿಕ ಕಾರ್ಡ್ ಬೇಡ, ಜೆರಾಕ್ಸ್ ಪ್ರತಿಗಳೂ ಬೇಡ” ಎಂದು ತಿಳಿಸಿದ್ದಾರೆ.

ಯೂನಿಕ್ ಐಡೆಂಟಿಫಿಕೇಶನ್ ಅಥಾರಿಟಿ ಆಫ್ ಇಂಡಿಯಾ (ಯುಐಡಿಎಐ) ಸಹಯೋಗದೊಂದಿಗೆ ಈ ಆ್ಯಪ್ ಅನ್ನು ಅಭಿವೃದ್ಧಿಪಡಿಸಲಾಗಿದೆ. ಇದರ ಪ್ರಮುಖ ವೈಶಿಷ್ಟ್ಯಗಳೆಂದರೆ ಕ್ಯೂಆರ್ ಕೋಡ್ ಆಧಾರಿತ ತ್ವರಿತ ಪರಿಶೀಲನೆ ಮತ್ತು ನೈಜ-ಸಮಯದ ಮುಖ ಗುರುತಿನ ದೃಢೀಕರಣ. ಈ ಸೌಲಭ್ಯಗಳಿಂದಾಗಿ ಜನರು ಪ್ರಯಾಣ, ಹೋಟೆಲ್ ಚೆಕ್-ಇನ್ ಅಥವಾ ಖರೀದಿಗಳಂತಹ ಸಂದರ್ಭಗಳಲ್ಲಿ ಭೌತಿಕ ಆಧಾರ್ ಕಾರ್ಡ್ ಅಥವಾ ಅದರ ಜೆರಾಕ್ಸ್ ಪ್ರತಿಗಳನ್ನು ಕೊಂಡೊಯ್ಯುವ ಅಗತ್ಯವಿರುವುದಿಲ್ಲ.

“ಈಗ ಕೇವಲ ಒಂದು ಸ್ಪರ್ಶದಿಂದ ಬಳಕೆದಾರರು ಅಗತ್ಯವಿರುವ ಮಾಹಿತಿಯನ್ನು ಮಾತ್ರ ಹಂಚಿಕೊಳ್ಳಬಹುದು. ಇದರಿಂದ ಅವರ ವೈಯಕ್ತಿಕ ಮಾಹಿತಿಯ ಮೇಲೆ ಅವರಿಗೆ ಸಂಪೂರ್ಣ ನಿಯಂತ್ರಣ ಸಿಗುತ್ತದೆ” ಎಂದು ಅಶ್ವಿನಿ ವೈಷ್ಣವ್ ಹೇಳಿದ್ದಾರೆ. ಸದ್ಯಕ್ಕೆ ಈ ಹೊಸ ಆಧಾರ್ ಆ್ಯಪ್ (ಬೇಟಾ ಆವೃತ್ತಿ) ಪರೀಕ್ಷಾ ಹಂತದಲ್ಲಿದೆ.

ಇದಲ್ಲದೆ, ಆಧಾರ್ ಪರಿಶೀಲನೆಯ ಪ್ರಕ್ರಿಯೆಯು ಯುಪಿಐ ಪಾವತಿ ಮಾಡುವಷ್ಟು ಸುಲಭವಾಗಲಿದೆ ಎಂದು ಅವರು ತಿಳಿಸಿದ್ದಾರೆ. “ಬಳಕೆದಾರರು ತಮ್ಮ ಗೌಪ್ಯತೆಯನ್ನು ಕಾಪಾಡಿಕೊಂಡು ಡಿಜಿಟಲ್ ರೂಪದಲ್ಲಿ ತಮ್ಮ ಆಧಾರ್ ವಿವರಗಳನ್ನು ಪರಿಶೀಲಿಸಬಹುದು ಮತ್ತು ಹಂಚಿಕೊಳ್ಳಬಹುದು. ಕೇವಲ ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಿ ಅಥವಾ ವಿನಂತಿಸುವ ಅಪ್ಲಿಕೇಶನ್ ಅನ್ನು ಬಳಸಿ” ಎಂದು ಅವರು ವಿವರಿಸಿದ್ದಾರೆ.

ಈ ಆ್ಯಪ್ ಎಷ್ಟು ಉಪಯುಕ್ತ ?

ಈ ಆ್ಯಪ್‌ನಿಂದಾಗಿ ಬಳಕೆದಾರರು ಇನ್ನು ಮುಂದೆ ಪ್ರಯಾಣ ಮಾಡುವಾಗ, ಹೋಟೆಲ್‌ಗಳಲ್ಲಿ ತಂಗುವಾಗ ಅಥವಾ ಶಾಪಿಂಗ್ ಮಾಡುವಾಗ ಭೌತಿಕ ಆಧಾರ್ ಕಾರ್ಡ್ ಅನ್ನು ಕೊಂಡೊಯ್ಯಬೇಕಾಗಿಲ್ಲ ಅಥವಾ ಅದರ ಜೆರಾಕ್ಸ್ ಪ್ರತಿಗಳನ್ನು ನೀಡಬೇಕಾಗಿಲ್ಲ. ಈ ಆಧಾರ್ ಆ್ಯಪ್ ಸಂಪೂರ್ಣವಾಗಿ ಸುರಕ್ಷಿತವಾಗಿದ್ದು, ಬಳಕೆದಾರರ ಒಪ್ಪಿಗೆಯ ಮೇರೆಗೆ ಮಾತ್ರ ಮಾಹಿತಿಯನ್ನು ಹಂಚಿಕೊಳ್ಳಲು ಸಾಧ್ಯವಾಗುತ್ತದೆ. ಇದು ಶೇಕಡಾ 100 ರಷ್ಟು ಡಿಜಿಟಲ್ ಮತ್ತು ಭದ್ರವಾಗಿದೆ ಎಂದು ಸರ್ಕಾರ ಭರವಸೆ ನೀಡಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read