ಬೆಳಗಾವಿ, ಹುಬ್ಬಳ್ಳಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳಾಗಿ ಮೇಲ್ದರ್ಜೆಗೇರಿಸಲು ಪ್ರಸ್ತಾವನೆ

ಬೆಂಗಳೂರು: ಹುಬ್ಬಳ್ಳಿ ಮತ್ತು ಬೆಳಗಾವಿಗೆ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳಾಗಲು ಅರ್ಹತೆ ಹೊಂದಿದ್ದು, ಇವುಗಳಿಗೆ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಟ್ಯಾಗ್ ನೀಡಲು ಕೋರಲಾಗಿದೆ.

ಸಚಿವರಾದ ಎಂ.ಬಿ. ಪಾಟೀಲ್, ಪ್ರಿಯಾಂಕ್ ಖರ್ಗೆ ಅವರು ಮೈಸೂರು, ಹುಬ್ಬಳ್ಳಿ, ಕಲಬುರಗಿ, ಬೀದರ್, ಬೆಳಗಾವಿ ಹಾಗೂ ವಿದ್ಯಾನಗರ ವಿಮಾನ ನಿಲ್ದಾಣಗಳಲ್ಲಿನ ವಿಮಾನ ಹಾರಾಟ ಸಂಬಂಧ, ಪ್ರಮುಖ ವಿಮಾನಯಾನ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ಮಹತ್ವದ ಮಾತುಕತೆ ನಡೆಸಿದ್ದಾರೆ.

ಮೈಸೂರು, ಕಲಬುರಗಿ, ಬೀದರ್, ವಿದ್ಯಾನಗರಕ್ಕೆ ವಿಮಾನ ಸಂಪರ್ಕವನ್ನು ಹೆಚ್ಚಿಸಲು ವಿಮಾನಯಾನ ಸಂಸ್ಥೆಗಳಿಗೆ ತಿಳಿಸಿದ್ದಾರೆ.

ಸ್ಟಾರ್ ಏರ್ ಏಪ್ರಿಲ್ 15 ರಿಂದ ಬೀದರ್-ಬೆಂಗಳೂರು ವಿಮಾನಗಳನ್ನು ಪುನರಾರಂಭಿಸಲಿದೆ. ಹೆಚ್ಚಿನ ವಿಮಾನಗಳು, MRO ಕೇಂದ್ರಗಳನ್ನು ಪ್ರಸ್ತಾಪಿಸಲಾಗಿದೆ. ವಿಮಾನಯಾನ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿ ಚರ್ಚಿಸಲಾಗಿದೆ.

ಕಲಬುರಗಿಯಿಂದ ಪ್ರಸ್ತುತ ವಾರದಲ್ಲಿ ಕೇವಲ 3 ದಿನಗಳು ಮಾತ್ರ ವಿಮಾನ ಹಾರಾಟ ನಡೆಯುತ್ತಿದ್ದು, ಪ್ರಯಾಣಿಕರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಈ ಹಿನ್ನಲೆಯಲ್ಲಿ, ಹಾರಾಟವನ್ನು ವಾರದ ಎಲ್ಲ 7 ದಿನಗಳಿಗೆ ವಿಸ್ತರಿಸಲು ತಿಳಿಸಲಾಯಿತು.

ಅದೇ ರೀತಿ, ಅರಮನೆ ನಗರಿ ಮೈಸೂರಿನಿಂದಲೂ ಪ್ರಯಾಣಿಕರ ಒತ್ತಡವಿದ್ದು, ಅಲ್ಲಿನ ಹಾರಾಟ ಹೆಚ್ಚಿಸುವ ಅಗತ್ಯವಿದೆ ಎಂದು ಒತ್ತಿಹೇಳಲಾಯಿತು. ಬೀದರ್, ಹುಬ್ಬಳ್ಳಿ ಹಾಗೂ ಬೆಳಗಾವಿಯಿಂದಲೂ ಬೇಡಿಕೆ ಹೆಚ್ಚಾಗಿರುವುದರಿಂದ, ಹೆಚ್ಚಿನ ವಿಮಾನ ಸಂಚಾರ ಕಲ್ಪಿಸಲು ಸೂಚಿಸಲಾಗಿದೆ. ಈ ಸಂಬಂಧ ಯಾವುದೇ ತೊಂದರೆಗಳಿದ್ದರೆ, ಸರ್ಕಾರದ ವತಿಯಿಂದ ಬಗೆಹರಿಸುವ ಭರವಸೆ ನೀಡಲಾಯಿತು.

ವಿಜಯಪುರ ವಿಮಾನ ನಿಲ್ದಾಣ :ಹಾರಾಟಕ್ಕೆ ಸಿದ್ದತೆ ಮಾಡಿಕೊಳ್ಳುವಂತೆ ಸಲಹೆ

ವಿಜಯಪುರ ವಿಮಾನ ನಿಲ್ದಾಣವು ಕಾರ್ಯಾರಂಭಕ್ಕೆ ಸಿದ್ಧವಾಗಿದೆ. ಪರಿಸರ ಇಲಾಖೆಯ ಅನುಮತಿಯಷ್ಟೇ ಅಗತ್ಯವಿದ್ದು, ವಿಮಾನಗಳ ಸಂಚಾರಕ್ಕೆ ಅಗತ್ಯ ಸಿದ್ದತೆಗಳನ್ನು ಕೈಗೊಳ್ಳುವಂತೆ ಸೂಚಿಸಲಾಯಿತು.

ಇಂಡಿಗೋ, ಟಾಟಾ, ಸ್ಪೈಸ್ ಜೆಟ್, ಏರ್ ಏಷ್ಯಾ ಸೇರಿದಂತೆ ಹಲವು ಪ್ರಮುಖ ವಿಮಾನಯಾನ ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಮೂಲ ಸೌಲಭ್ಯ ಅಭಿವೃದ್ಧಿ ಇಲಾಖೆಯ ಹಿರಿಯ ಅಧಿಕಾರಿಗಳು ಇಂದಿನ ಸಭೆಯಲ್ಲಿ ಉಪಸ್ಥಿತರಿದ್ದರು.

ಬೆಂಗಳೂರಿಗೆ 2ನೇ ಅಂ.ರಾ. ವಿಮಾನ ನಿಲ್ದಾಣ: ಎರಡು ತಾಣ ವೀಕ್ಷಿಸಿದ AAI ತಂಡ

ಬೆಂಗಳೂರು ನಗರದ ಉದ್ದೇಶಿತ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ರಾಜ್ಯ ಸರ್ಕಾರವು ಗುರುತಿಸಿರುವ 3 ಸ್ಥಳಗಳ ಪೈಕಿ ಕನಕಪುರ ರಸ್ತೆಯಲ್ಲಿರುವ 2 ತಾಣಗಳ ಪರಿಶೀಲನೆಯನ್ನು ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರದ AAI ಉನ್ನತ ಮಟ್ಟದ ತಂಡವು ಈ ದಿನ ನಡೆಸಿತು. ನಂತರ ತಂಡದ ಸದಸ್ಯರು ಸಚಿವರನ್ನು ಭೇಟಿಯಾಗಿ ವಿಚಾರ ವಿನಿಮಯ ನಡೆಸಿದರು.

ಈ ಸಂದರ್ಭದಲ್ಲಿ ಉದ್ದೇಶಿತ ವಿಮಾನ ನಿಲ್ದಾಣದ ಅಗತ್ಯ, ಬೆಂಗಳೂರಿನ ನಾಗರಿಕ ಮತ್ತು ಕೈಗಾರಿಕಾ ಅಗತ್ಯ ಇತ್ಯಾದಿಗಳನ್ನು ತಂಡದ ಸದಸ್ಯರಿಗೆ ವಿವರಿಸಿ, ಪ್ರಾತ್ಯಕ್ಷಿಕೆ ಪ್ರದರ್ಶಿಸಿ, ಪಾರದರ್ಶಕವಾಗಿ ಸ್ಥಳ ಗುರುತಿಸುವ ಕೆಲಸ ಆಗಲಿ ಎಂದು ಎಂ.ಬಿ. ಪಾಟೀಲ್ ಸಲಹೆ ನೀಡಿದ್ದಾರೆ.

ತಂಡವು ನಾಳೆ ನೆಲಮಂಗಲ- ಕುಣಿಗಲ್ ರಸ್ತೆಯ ಸ್ಥಳ ಪರಿಶೀಲನೆ ನಡೆಸಲಿದೆ. ಬಳಿಕ ಪ್ರಾಧಿಕಾರದ ಅಭಿಪ್ರಾಯ ತಿಳಿದುಕೊಂಡು, ಮುಂದಿನ ಕ್ರಮ ಕೈಗೊಳ್ಳಲಾಗುವುದು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read