ಆಘಾತಕಾರಿ ಘಟನೆಯಲ್ಲಿ, ಗರ್ಭಿಣಿ ಮಹಿಳೆಯೊಬ್ಬರ ಮೇಲೆ ಆಕೆಯ ಪತಿಯೇ ಸಿಮೆಂಟ್ ಇಟ್ಟಿಗೆಗಳಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾನೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ. ಈ ಕೃತ್ಯಕ್ಕೆ ಸಂಬಂಧಿಸಿದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ಬಂಧಿತ ಆರೋಪಿಯನ್ನು ಬಷಾರತ್ (32) ಎಂದು ಗುರುತಿಸಲಾಗಿದೆ. ಈತ ವೃತ್ತಿಯಲ್ಲಿ ಒಳಾಂಗಣ ವಿನ್ಯಾಸಗಾರ. ಕೋಲ್ಕತ್ತಾ ಮೂಲದ ಶಬಾನಾ (22) ಮತ್ತು ಬಷಾರತ್ ಅವರು ಜನವರಿ 2023 ರಲ್ಲಿ ರಾಜಸ್ಥಾನದ ಅಜ್ಮೀರ್ ದರ್ಗಾಕ್ಕೆ ಭೇಟಿ ನೀಡಿದ್ದಾಗ ಆಟೋದಲ್ಲಿ ಭೇಟಿಯಾಗಿದ್ದರು.
ಈ ಜೋಡಿ ಅಕ್ಟೋಬರ್ 2024 ರಲ್ಲಿ ಕೋಲ್ಕತ್ತಾದಲ್ಲಿ ವಿವಾಹವಾಗಿತ್ತು. ವಿವಾಹದ ನಂತರ, ಶಬಾನಾ ಈ ವರ್ಷದ ಆರಂಭದಲ್ಲಿ ಹೈದರಾಬಾದ್‌ಗೆ ಸ್ಥಳಾಂತರಗೊಂಡಿದ್ದರು. ಆದರೆ, ನಂತರ ದಂಪತಿಗಳ ನಡುವೆ ಕೌಟುಂಬಿಕ ಸಮಸ್ಯೆಗಳು ಉಂಟಾಗಿದ್ದವು ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.
ಮಾರ್ಚ್ 29, 2025 ರಂದು, ಶಬಾನಾ, ದೌರ್ಬಲ್ಯ ಮತ್ತು ವಾಂತಿ ಸಮಸ್ಯೆಯಿಂದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ತನ್ನ ಪತಿ ತನ್ನನ್ನು ನಿಂದಿಸುತ್ತಿದ್ದನೆಂದು ಸಿಬ್ಬಂದಿಗೆ ತಿಳಿಸಿದ್ದಳು.
ನಂತರ, ಏಪ್ರಿಲ್ 1 ರಂದು ರಾತ್ರಿ ಸುಮಾರು 10 ಗಂಟೆಗೆ, ಆರೋಪಿ ಬಷಾರತ್ ಆಕೆಯನ್ನು ಮನೆಗೆ ಕರೆದೊಯ್ಯಲು ಆಸ್ಪತ್ರೆಗೆ ಬಂದಿದ್ದನು. ಆದರೆ, ಶಬಾನಾ ಆತನೊಂದಿಗೆ ಹೋಗಲು ನಿರಾಕರಿಸಿದ್ದಳು.
ಕೋಪಗೊಂಡ ಬಷಾರತ್, ಶಬಾನಾಳನ್ನು ಬಲವಂತವಾಗಿ ಹೊರಗೆ ಎಳೆದು ಆಸ್ಪತ್ರೆಯ ಬಳಿಯ ರಸ್ತೆಗೆ ತಳ್ಳಿ, ಎರಡು ಸಿಮೆಂಟ್ ಇಟ್ಟಿಗೆಗಳಿಂದ ಆಕೆಯ ಎದೆ ಮತ್ತು ತಲೆಗೆ ಸುಮಾರು 12 ರಿಂದ 14 ಬಾರಿ ಬಲವಾಗಿ ಹಲ್ಲೆ ನಡೆಸಿ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಆರೋಪಿಸಲಾಗಿದೆ.
ಪೊಲೀಸ್ ಪ್ರಕಟಣೆಯ ಪ್ರಕಾರ, ಸ್ಥಳಕ್ಕೆ ಧಾವಿಸಿದ ಆಸ್ಪತ್ರೆ ಸಿಬ್ಬಂದಿ ಆಕೆಯನ್ನು ಗುರುತಿಸಿದ್ದಾರೆ. ಆರೋಪಿಯನ್ನು ಏಪ್ರಿಲ್ 2 ರ ರಾತ್ರಿ ಬಂಧಿಸಲಾಗಿದ್ದು, ಏಪ್ರಿಲ್ 3 ರಂದು ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ. ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾದ ಮಹಿಳೆ ಪ್ರಸ್ತುತ ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿದ್ದಾರೆ.
A post shared by Mohammedhaneef Salman Hussain (@mohammedhaneef007)