ಅಳಿವಿನಂಚಿನ ಆಸೆಯ ಚಿಗುರು: 100ರ ಹರೆಯದ ಆಮೆ ದಂಪತಿಯಿಂದ ನಾಲ್ಕು ಹೊಸ ಜೀವಗಳು !

ಫಿಲಡೆಲ್ಫಿಯಾ ಮೃಗಾಲಯದಲ್ಲಿ ವಾಸಿಸುತ್ತಿರುವ ಸುಮಾರು 100 ವರ್ಷ ವಯಸ್ಸಿನ ಗ್ಯಾಲಪಗೋಸ್ ಆಮೆಗಳ ಜೋಡಿ ‘ಮಾಮಿ’ ಮತ್ತು ‘ಅಬ್ರಾಝೋ’ ನಾಲ್ಕು ಮುದ್ದಾದ ಮರಿಗಳಿಗೆ ಜನ್ಮ ನೀಡುವ ಮೂಲಕ ವಂಶಾಭಿವೃದ್ಧಿಯಲ್ಲಿ ಹೊಸ ಅಧ್ಯಾಯ ಬರೆದಿದೆ. ಅಳಿವಿನಂಚಿನಲ್ಲಿರುವ ಈ ಪ್ರಭೇದದ ಸಂತಾನೋತ್ಪತ್ತಿಯು ಸಂರಕ್ಷಣಾ ಕಾರ್ಯಕರ್ತರಲ್ಲಿ ಸಂತಸ ಮೂಡಿಸಿದೆ.

ಗುರುವಾರದಂದು ಮೃಗಾಲಯದ ಅಧಿಕಾರಿಗಳು ಈ ಸಂತಸದ ಸುದ್ದಿಯನ್ನು ಹಂಚಿಕೊಂಡಿದ್ದು, ಈ ಶತಾಯುಷಿ ದಂಪತಿಯ ನಾಲ್ಕು ಮೊಟ್ಟೆಗಳು ಯಶಸ್ವಿಯಾಗಿ ಒಡೆದು ಮರಿಗಳಾಗಿವೆ ಎಂದು ತಿಳಿಸಿದ್ದಾರೆ. ಪ್ರವಾಸಿಗರ ಅಚ್ಚುಮೆಚ್ಚಿನ ಈ ಜೋಡಿಯು ನೀಡಿದ ಈ ಸಂತಾನವು ಗ್ಯಾಲಪಗೋಸ್ ಆಮೆಗಳ ಸಂಕುಲವನ್ನು ಉಳಿಸುವ ಪ್ರಯತ್ನಗಳಿಗೆ ಬಲ ನೀಡಲಿದೆ.

ತೀವ್ರವಾಗಿ ಅಳಿವಿನಂಚಿನಲ್ಲಿರುವ ಪಶ್ಚಿಮ ಸಾಂಟಾ ಕ್ರೂಜ್ ಗ್ಯಾಲಪಗೋಸ್ ಆಮೆಗಳು ವಾಸಸ್ಥಾನದ ನಾಶ, ಪರಕೀಯ ಜೀವಿಗಳ ಹಾವಳಿ ಮತ್ತು ಮಾನವ-ವನ್ಯಜೀವಿ ಸಂಘರ್ಷದಿಂದ ತೊಂದರೆಗೀಡಾಗಿವೆ. ಈ ಹಿನ್ನೆಲೆಯಲ್ಲಿ, ಅಸೋಸಿಯೇಷನ್ ಆಫ್ ಮೃಗಾಲಯಗಳು ಮತ್ತು ಅಕ್ವೇರಿಯಮ್ಸ್ (AZA) ಈ ಪ್ರಭೇದದ ಸಂರಕ್ಷಣೆ ಮತ್ತು ಆನುವಂಶಿಕ ವೈವಿಧ್ಯತೆಯನ್ನು ಕಾಪಾಡಲು ವಿಶೇಷ ಕಾರ್ಯಕ್ರಮವನ್ನು ರೂಪಿಸಿದೆ.

‘ಮಾಮಿ’ ಎಂಬ ಹೆಣ್ಣು ಆಮೆಯು 1932 ರಲ್ಲಿ ಫಿಲಡೆಲ್ಫಿಯಾ ಮೃಗಾಲಯಕ್ಕೆ ಆಗಮಿಸಿತು. ಆಕೆಯ ಸಂಗಾತಿ ‘ಅಬ್ರಾಝೋ’ 2020 ರಲ್ಲಿ ಆಕೆಯೊಂದಿಗೆ ಸೇರಿದನು. ಅಮೆರಿಕಾದಲ್ಲಿ ಕೇವಲ ಮೂರು ಮೃಗಾಲಯಗಳು ಮಾತ್ರ ಈ ಸಂತಾನೋತ್ಪತ್ತಿ ಜೋಡಿಗಳನ್ನು ಹೊಂದಿವೆ ಎಂಬುದು ಗಮನಾರ್ಹ. ಕಳೆದ ನವೆಂಬರ್‌ನಲ್ಲಿ ಮಾಮಿ 16 ಮೊಟ್ಟೆಗಳನ್ನು ಇಟ್ಟಿದ್ದು, ಮೃಗಾಲಯದ ಸರೀಸೃಪ ಮತ್ತು ಉಭಯಚರ ತಜ್ಞರ ತಂಡವು ಅವುಗಳನ್ನು ಅಗೆದು ಸೂಕ್ತ ತಾಪಮಾನದಲ್ಲಿ ಕಾವುಕೊಟ್ಟಿತ್ತು. ವಿಶೇಷವೆಂದರೆ, ಮೊಟ್ಟೆಗಳ ಕಾವು ಕೊಡುವ ತಾಪಮಾನವನ್ನು ನಿಯಂತ್ರಿಸುವ ಮೂಲಕ ಗಂಡು ಮತ್ತು ಹೆಣ್ಣು ಮರಿಗಳ ಸಂಖ್ಯೆಯನ್ನು ನಿರ್ಧರಿಸಬಹುದು. ಅದರಂತೆ, ನಾಲ್ಕು ಮೊಟ್ಟೆಗಳನ್ನು ಗಂಡು ಮರಿಗಳಿಗಾಗಿ ಮತ್ತು ನಾಲ್ಕು ಮೊಟ್ಟೆಗಳನ್ನು ಹೆಣ್ಣು ಮರಿಗಳಿಗಾಗಿ ನಿರ್ದಿಷ್ಟ ತಾಪಮಾನದಲ್ಲಿ ಇಡಲಾಗಿತ್ತು.

ಫೆಬ್ರವರಿ 27 ರಂದು ಮೊಟ್ಟೆಗಳು ಒಡೆಯಲು ಪ್ರಾರಂಭಿಸಿದ್ದು, ಇದೀಗ ನಾಲ್ಕು ಹೆಣ್ಣು ಮರಿಗಳು ಆರೋಗ್ಯವಾಗಿವೆ. ಈ ಹಿಂದೆ ಮಾಮಿ ಇಟ್ಟ ಮೊಟ್ಟೆಗಳು ಫಲಪ್ರದವಾಗಿರಲಿಲ್ಲ. ಸುಮಾರು 70-80 ಗ್ರಾಂ ತೂಕವಿರುವ ಈ ಮರಿಗಳು ಚೆನ್ನಾಗಿ ಆಹಾರ ಸೇವಿಸುತ್ತಿದ್ದು, ಉತ್ತಮವಾಗಿ ಬೆಳೆಯುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಾಮಿ ಮೃಗಾಲಯಕ್ಕೆ ಆಗಮಿಸಿದ 93 ನೇ ವಾರ್ಷಿಕೋತ್ಸವದ ದಿನವಾದ ಏಪ್ರಿಲ್ 23 ರಂದು ಈ ಹೊಸ ಅತಿಥಿಗಳನ್ನು ಸಾರ್ವಜನಿಕರಿಗೆ ಪರಿಚಯಿಸಲಾಗುವುದು.

ಮಾಮಿ ಸುಮಾರು 97 ವರ್ಷ ವಯಸ್ಸಿನವಳಾಗಿದ್ದು, 284 ಪೌಂಡ್ ತೂಗುತ್ತಾಳೆ. ಅವಳು ಗ್ಯಾಲಪಗೋಸ್ ದ್ವೀಪಗಳಲ್ಲಿ ಕಾಡಿನಲ್ಲಿ ಜನಿಸಿದಳು ಎಂದು ನಂಬಲಾಗಿದೆ. ಇನ್ನು ಅಬ್ರಾಝೋ ಸುಮಾರು 96 ವರ್ಷ ವಯಸ್ಸಿನವನೆಂದು ಅಂದಾಜಿಸಲಾಗಿದೆ. ಈ ವಯಸ್ಸಿನಲ್ಲಿ ಈ ಜೋಡಿ ಮರಿಗಳನ್ನು ನೀಡಿರುವುದು ನಿಜಕ್ಕೂ ಅಚ್ಚರಿಯ ವಿಷಯವಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read