ಬೆಂಗಳೂರು: ಇನ್ಮುಂದೆ ಸರ್ಕಾರಿ ಆಸ್ಪತ್ರೆಗಳಲ್ಲಿ ಕರ್ತವ್ಯ ನಿರ್ವಹಿಸುವ ವೈದ್ಯರು ಬೆಳಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆವರೆಗೆ ಕಡ್ಡಾಯವಾಗಿ ಕಾರ್ಯ ನಿರ್ವಹಿಸಬೇಕು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ತಿಳಿಸಿದ್ದಾರೆ.
ವಿಧಾನಪರಿಷತ್ ಪ್ರಶ್ನೋತರ ಕಲಾಪದಲ್ಲಿ ಮಾತನಾಡಿದ ಸಚಿವರು, ಸರ್ಕಾರಿ ಆಸ್ಪತ್ರೆಗಳಲ್ಲಿ ಕಾರ್ಯ ನಿರ್ವಹಿಸುವ ವೈದ್ಯರು ತಮ್ಮ ಕರ್ತವ್ಯದ ಸಂದರ್ಭದಲ್ಲೇ ಬೇರೆ ಕಡೆ ಕರ್ತವ್ಯ ನಿರ್ವಹಿಸುತ್ತಾರೆ ಎಂಬ ಆರೋಪ ಕೇಳಿಬರುತ್ತಿದೆ. ಇದನ್ನು ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ. ಬೆಳಿಗ್ಗೆ 9 ಗಂಟೆಗೆ ಕರ್ತವ್ಯಕ್ಕೆ ಹಾಜರಾದರೆ ಸಂಜೆ 4 ಗಂಟೆವರೆಗೂ ಸರ್ಕಾರಿ ಆಸ್ಪತ್ರೆಗಳಲ್ಲೇ ಅವರು ಕರ್ತವ್ಯ ನಿರ್ವಹಿಸಬೇಕು. ಬೇರೆಡೆ ಪ್ರ್ಯಾಕ್ಟೀಸ್ ಮಾಡುವಂತಿಲ್ಲ ಎಂದು ಸೂಚನೆ ನೀಡಲಾಗಿದೆ ಎಂದರು.
ಒಂದು ವೇಳೆ ಯಾರಾದರೂ ಉಲ್ಲಂಘನೆ ಮಾಡಿರುವುದು ಕಂಡುಬಂದರೆ ಶಿಸ್ತುಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.
ಇನ್ನು ವೈದ್ಯರು ಕಡ್ಡಾಯವಾಗಿ ಕರ್ತವ್ಯಕ್ಕೆ ಹಾಜರಾದ ವೇಳೆ ನಾಲ್ಕು ಬಾರಿ ಬಯೋಮೆಟ್ರಿಕ್ಗೆ ತಮ್ಮ ಹಸ್ತಮುದ್ರೆ ಹಾಕಬೇಕು. ಬೆಳಗ್ಗೆ 9 ಗಂಟೆ, ಮಧ್ಯಾಹ್ನ 2, 3 ಮತ್ತು 4 ಗಂಟೆಗೆ ಕಡ್ಡಾಯವಾಗಿ ಹಾಕಲೇಬೇಕು. ಇದರ ಆಧಾರಿತವಾಗಿಯೇ ಸಂಬಳವನ್ನು ನೀಡಲಾಗುವುದು. ಈ ಕುರಿತು ಮುಖ್ಯಸ್ಥರ ಜೊತೆಯೂ ಚರ್ಚೆ ಮಾಡಲಾಗಿದೆ. ರೋಗಿಗಳಿಗೆ ಸಕಾಲಕ್ಕೆ ಸರಿಯಾಗಿ ಚಿಕಿತ್ಸೆ ನೀಡುವುದು ಸರ್ಕಾರದ ಮೊದಲ ಆದ್ಯತೆ ಎಂದರು.
ಜಿಲ್ಲಾಸ್ಪತ್ರೆಗಳಲ್ಲಿ ಡಿಎಚ್ಒ, ಪ್ರಾಧ್ಯಾಪಕರು, ಸಹಾಯಕ ಪ್ರಾಧ್ಯಾಪಕರು ಕರ್ತವ್ಯ ನಿರ್ವಹಿಸುತ್ತಾರೆ. ನಾವು ಎನ್ಎಂಸಿ ಜಾರಿಗೆ ತಂದಿರುವ ಮಾರ್ಗಸೂಚಿಗಳ ಮೂಲಕವೇ ಕಾರ್ಯ ನಿರ್ವಹಿಸುವಂತೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

