ಕೊಪ್ಪಳ ನಗರದಲ್ಲಿ ಬಲ್ದೋಟಾ ಸ್ಟೀಲ್ ಫ್ಯಾಕ್ಟರಿ ನಿರ್ಮಾಣಕ್ಕೆ ಭಾರಿ ವಿರೋಧ ವ್ಯಕ್ತವಾಗಿದೆ. ಈಗಾಗಲೇ ಕೊಪ್ಪಳ ಬಂದ್ ಕೂಡ ನಡೆಸಲಾಗಿದೆ.
ಗವಿಮಠದ ಶ್ರೀಗಳು ಯಾವುದೇ ಕಾರಣಕ್ಕೂ ಫ್ಯಾಕ್ಟರಿ ನಿರ್ಮಿಸಬಾರದು ಎಂದು ಹೋರಾಟ ನಡೆಸಿದ್ದಾರೆ. ಇಂದು ಬೆಂಗಳೂರಿನಲ್ಲಿ ಹೋರಾಟಗಾರರು ಮತ್ತು ಜನಪ್ರತಿನಿಧಿಗಳ ನಿಯೋಗದಿಂದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಭೇಟಿ ಮಾಡಿ ಕಾಮಗಾರಿ ಸ್ಥಗಿತಗೊಳಿಸುವಂತೆ ಮನವಿ ಮಾಡಲಾಗಿದೆ.
ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡಲೇ ಬಲ್ಡೋಟಾ ಫ್ಯಾಕ್ಟರಿ ಕಾಮಗಾರಿ ಸ್ಥಗಿತಗೊಳಿಸುವಂತೆ ಜಿಲ್ಲಾಧಿಕಾರಿಗೆ ಸೂಚನೆ ನೀಡಿದ್ದಾರೆ. ಈ ಮೂಲಕ ಕೊಪ್ಪಳ ಜಿಲ್ಲಾ ಜನರ ಹೋರಾಟಕ್ಕೆ ಜಯ ಸಿಕ್ಕಂತಾಗಿದೆ.
ಕೊಪ್ಪಳ ನಗರದಿಂದ ಕೂಗಳತೆ ದೂರದಲ್ಲಿ ರಾಜ್ಯದ ಎರಡನೇ ಅತಿ ದೊಡ್ಡ ಸ್ಟೀಲ್ ಫ್ಯಾಕ್ಟರಿ ನಿರ್ಮಾಣಕ್ಕೆ ಬಲ್ಡೋಟಾ ಸಂಸ್ಥೆ ಮುಂದಾಗಿತ್ತು. 54,000 ಕೋಟಿ ರೂಪಾಯಿ ವೆಚ್ಚದಲ್ಲಿ ವಾರ್ಷಿಕ 10.50 ಮಿಲಿಯನ್ ಕಬ್ಬಿಣ ಉತ್ಪಾದನೆ ಸಾಮರ್ಥ್ಯದ ಘಟಕ ನಿರ್ಮಾಣಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಇದಕ್ಕಾಗಿ ವರ್ಷಗಳ ಹಿಂದೆಯೇ 1034 ಎಕರೆ ಭೂಮಿಯನ್ನು ಕಂಪನಿ ರೈತರಿಂದ ಪಡೆದುಕೊಂಡಿದ್ದು, ಕಾರ್ಖಾನೆ ನಿರ್ಮಾಣ ಕಾಮಗಾರಿ ಕೈಗೊಂಡಿತ್ತು. ಹೋರಾಟ ತೀವ್ರಗೊಂಡ ಹಿನ್ನೆಲೆಯಲ್ಲಿ ಕಾಮಗಾರಿ ನಡೆಸಿದಂತೆ ಸಿಎಂ ಸೂಚನೆ ನೀಡಿದ್ದಾರೆ.