ʼಚಾಲೆಂಜಿಂಗ್ ಸ್ಟಾರ್ʼ ದರ್ಶನ್ ನಟನೆಯ, ತರುಣ್ ಸುಧೀರ್ ನಿರ್ದೇಶನದ ‘ಕಾಟೇರ’ ಕಳೆದ ವರ್ಷ ಡಿಸೆಂಬರ್ 29 ರಂದು ಬಿಡುಗಡೆಯಾಗಿ ಬಾಕ್ಸಾಫೀಸ್ ನಲ್ಲಿ ಧೂಳೆಬ್ಬಿಸುವ ಮೂಲಕ ಸ್ಯಾಂಡಲ್ವುಡ್ ನಲ್ಲಿ ಹೊಸ ದಾಖಲೆ ಬರೆದಿತ್ತು.
ಚಿತ್ರ ಬಿಡುಗಡೆಯಾಗಿ ಇಂದಿಗೆ ಒಂದು ವರ್ಷವಾಗಿದ್ದು, ಈ ಸಂತಸವನ್ನು ಚಿತ್ರತಂಡ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಮೂಲಕ ಪ್ರೇಕ್ಷಕರಿಗೆ ಧನ್ಯವಾದ ತಿಳಿಸಿದೆ.
ತರುಣ್ ಕಿಶೋರ್ ಸುಧೀರ್ ಹಾಗೂ ಜಡೇಶ್ ಕುಮಾರ್ ಹಂಪಿ ಈ ಚಿತ್ರದ ಕಥೆ ಬರೆದಿದ್ದು, ರಾಕ್ ಲೈನ್ ವೆಂಕಟೇಶ್ ತಮ್ಮ ರಾಕ್ ಲೈನ್ ಎಂಟರ್ಟೈನ್ಮೆಂಟ್ ಬ್ಯಾನರ್ ನಲ್ಲಿ ನಿರ್ಮಾಣ ಮಾಡಿದ್ದಾರೆ.
ʼಚಾಲೆಂಜಿಂಗ್ ಸ್ಟಾರ್ʼ ದರ್ಶನ್ ಸೇರಿದಂತೆ ಆರಾಧನಾ, ಅಚ್ಯುತ್ ಕುಮಾರ್, ಕುಮಾರ್ ಗೋವಿಂದ್, ಮಾಸ್ಟರ್ ರೋಹಿತ್, ಡ್ಯಾನಿಶ್ ಅಖ್ತರ್ ಸೈಫಿ, ಅವಿನಾಶ್, ಶ್ರೀನಿವಾಸ ಮೂರ್ತಿ, ಡಿಂಗ್ರಿ ನಾಗರಾಜ್, ಅನಿಲ್ ಕುಮಾರ್ ಬಣ್ಣ ಹಚ್ಚಿದ್ದು, ವಿ. ಹರಿಕೃಷ್ಣ ಅವರ ಸಂಗೀತ ನಿರ್ದೇಶನವಿದೆ. ಕೆ.ಎಂ. ಪ್ರಕಾಶ್ ಸಂಕಲನ ಹಾಗೂ ಸುಧಾಕರ್ ಎಸ್. ರಾಜ್ ಛಾಯಾಗ್ರಹಣವಿದೆ.