
ಹಾವೇರಿ: ಹಾಲಿನ ದರ ಏರಿಕೆ ಮಾಡಿದ ಬೆನ್ನಲ್ಲೇ ಉತ್ಪಾದಕರು ಮತ್ತು ಸಂಘಗಳಿಗೆ ನೀಡುತ್ತಿದ್ದ ಶೇಖರಣೆ ದರವನ್ನು ದಿಢೀರ್ ಕಡಿತ ಮಾಡಲಾಗಿದೆ.
ಹಾವೇರಿ ಹಾಲು ಒಕ್ಕೂಟದ ದಿಢೀರ್ ದರ ಕಡಿತದ ಕ್ರಮಕ್ಕೆ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆಕಳು ಹಾಲಿನ ದರವನ್ನು ಉತ್ಪಾದಕರಿಗೆ ಲೀಟರ್ ಗೆ 27 ರೂ. ಮತ್ತು ಸಂಘಗಳಿಗೆ 28.05 ರೂ.ಗೆ ದರ ಪರಿಷ್ಕರಣೆ ಮಾಡಲಾಗಿದೆ ಎಮ್ಮೆ ಹಾಲಿನ ದರವನ್ನು ಉತ್ಪಾದಕರಿಗೆ 39.50 ರೂ. ಹಾಗೂ ಸಂಘಗಳಿಗೆ 40.55 ರೂ.ಗೆ ದರ ಪರಿಷ್ಕರಣೆ ಮಾಡಲಾಗಿದೆ.
ಹಾವೇರಿ ಹಾಲು ಒಕ್ಕೂಟದ 2024ರ ಅ.10ರ ಆದೇಶದಂತೆ ಆಕಳು ಹಾಲಿಗೆ ಉತ್ಪಾದಕರಿಗೆ ಪ್ರತಿ ಲೀಟರ್ ಗೆ 30.50 ರೀ., ಸಂಘಗಳಿಗೆ 31.55 ರೂ. ದರ ನೀಡಲಾಗುತ್ತಿತ್ತು. ಎಮ್ಮೆ ಹಾಲಿಗೆ ಉತ್ಪಾದಕರಿಗೆ 43 ರೂಪಾಯಿ, ಸಂಘಗಳಿಗೆ 44.05 ರೂ. ದರ ನೀಡಲಾಗುತ್ತಿತ್ತು.
ಇದೀಗ ಹಾಲಿನ ಶೇಖರಣೆ ದರವನ್ನು ದಿಢೀರನೆ 3.50 ರೂ. ಕಡಿಮೆ ಮಾಡಲಾಗಿದೆ. ಬಹುತೇಕ ರೈತರ ಜೀವನಕ್ಕೆ ಪಶು ಸಂಗೋಪನೆ ಆಧಾರವಾಗಿದೆ. ಇತ್ತೀಚೆಗಷ್ಟೇ ಹಾಲಿನ ದರ ಏರಿಕೆ ಮಾಡಲಾಗಿದ್ದು, ಉತ್ಪಾದಕರಿಗೆ ನೀಡುವ ದರವನ್ನು ಕಡಿತ ಮಾಡಲಾಗಿದೆ. ಗ್ರಾಹಕರಿಂದ ಸಂಗ್ರಹಿಸಿದ ಹಣ ಎಲ್ಲಿಗೆ ಹೋಗುತ್ತದೆ ಎಂದು ಹಾಲು ಉತ್ಪಾದಕ ರೈತರು ಪ್ರಶ್ನಿಸಿದ್ದಾರೆ.