
ಬೆಂಗಳೂರು: ಪ್ರಕರಣವೊಂದರಲ್ಲಿ 2 ಲಕ್ಷ ಲಂಚ ಪಡೆಯುತ್ತಿದ್ದ ವೇಳೆ ಬೆಂಗಳೂರಿನ ಈಶಾನ್ಯ ವಿಭಾಗದ ಸೆನ್ ಠಾಣೆ ಎಸಿಪಿ ಹಾಗೂ ಎಎಸ್ಐ ಇಬ್ಬರೂ ಲೋಕಾಯುಕ್ತ ಬಲೆಗೆ ಬಿದ್ದಿದ್ದು, ಇಬ್ಬರನ್ನೂ ಬಂಧಿಸಲಾಗಿದೆ.
ಸೆನ್ ಪೊಲೀಸ್ ಠಾಣೆಯ ಎಸಿಪಿ ತನ್ವೀರ್ ಎಸ್.ಆರ್ ಹಾಗೂ ಎಎಸ್ಐ ಕೃಷ್ಣಮೂರ್ತಿ ಲೋಕಾಯುಕ್ತದಿಂದ ಬಂಧಿಸಲ್ಪಟ್ಟ ಆರೋಪಿಗಳು.
ಅದ್ವಿ ಗ್ರೂಪ್ ಆಫ್ ಕಂಪನೀಸ್ ಎಂಬ ಉದ್ಯಮ ಸಮೂಹದ ವೆಬ್ ಸೈಟ್ ನ್ನು ಹ್ಯಾಕ್ ಮಾಡಿದ್ದ ದುಷ್ಕರ್ಮಿಗಳು ಅದರಲ್ಲಿ ತಪ್ಪು ಮಾಹಿತಿ ಪ್ರಕಟಿಸಿದ್ದರು. ಇದರಿಂದ ಕಂಪನಿಗೆ ನಷ್ಟವಾಗುತ್ತಿತ್ತು. ಈ ಬಗ್ಗೆ ಕಂಪನಿ ಮಾಲೀಕ ಮಧುಸೂದನ್ ಬಿ.ಎಸ್ ಈಶಾನ್ಯ ವಿಭಾಗದ ಸೆನ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡರೂ ಪೊಲೀಸರು ಆರೋಪಿಗಳನ್ನು ಬಂಧಿಸಿರಲಿಲ್ಲ.
ಆರೋಪಿಗಳನ್ನು ಬಂಧಿಸಲು 4 ಲಕ್ಷ ಲಂಚ ನೀಡುವಂತೆ ಎಸಿಪಿ ಹಾಗೂ ಎಎಸ್ಐ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ಮಧುಸೂದನ್ ಲೋಕಾಯುಕ್ತಕ್ಕೆ ದೂರು ನೀಡಿದ್ದರು. 2 ಲಕ್ಷ ಮುಂಗಡ ಹಣ ಪಡೆಯುತ್ತಿದ್ದಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಎಸಿಪಿ ತನ್ವೀರ್ ಹಾಗೂ ಎಎಸ್ಐ ಕೃಷ್ಣಮೂರ್ತಿ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಇಬ್ಬರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.