
ಕಲಬುರಗಿ: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಮೊಮ್ಮಗ, ಸಂಸದ ಬಿ.ವೈ. ರಾಘವೇಂದ್ರ- ತೇಜಸ್ವಿನಿ ದಂಪತಿಯ ಪುತ್ರ ಸುಭಾಷ್ ಅವರ ನಿಶ್ಚಿತಾರ್ಥ ಕಲಬುರಗಿಯ ದಾಸೋಹ ಪರಿವಾರದ ಲಿಂಗರಾಜಪ್ಪ ಅಪ್ಪ-ದೀಪಾಲಿಯವರ ಪುತ್ರಿ ಶ್ರಾವಣಾ ಅವರೊಂದಿಗೆ ಇಂದು ನೆರವೇರಲಿದೆ.
ಕಲಬುರಗಿಯ ಖಾಸಗಿ ಹೋಟೆಲ್ ನಲ್ಲಿ ವಿವಾಹ ನಿಶ್ಚಿತಾರ್ಥ ನಡೆಯಲಿದ್ದು, ಜೂನ್ 4ರಂದು ಬೆಂಗಳೂರಿನಲ್ಲಿ ಮದುವೆ ನಡೆಯಲಿದೆ.
ಸಂಸದ ರಾಘವೇಂದ್ರ ಅವರ ಪುತ್ರನಿಗೆ ಕಲಬುರಗಿಯಿಂದ ಸೊಸೆ ತರಲಾಗುತ್ತಿದೆ. ಮದುವೆ ದಿನಾಂಕ ಕೂಡ ನಿಗದಿ ಮಾಡಲಾಗಿದೆ. ಸಂಬಂಧದ ಜೊತೆಗೆ ಇಲ್ಲಿ ಪಕ್ಷ ಬೆಳೆಸಲು ಅನುಕೂಲವಾಗುತ್ತದೆ. ರಾಜಕೀಯದಲ್ಲಿ ಸ್ವಾರ್ಥ ಕೂಡ ಇರುತ್ತದೆ. ಹೀಗಾಗಿ ಸಂಬಂಧ ಬೆಳೆಸಿದ್ದೇವೆ. ನಮ್ಮ ಬೀಗರೂ ಕೂಡ ರಾಜಕೀಯದಲ್ಲಿ ಇದ್ದಾರೆ ಎಂದು ಯಡಿಯೂರಪ್ಪ ಹೇಳಿದ್ದಾರೆ.
ಯಡಿಯೂರಪ್ಪ ಅವರಿಗೂ ಕಲಬುರಗಿಗೂ ಅವಿನಾಭಾವ ಸಂಬಂಧ ಇದೆ. ನಾನು ಕೂಡ ಇಲ್ಲಿನ ಅಳಿಯನಾಗಿದ್ದೇನೆ. ಈಗ ನನ್ನ ಅಣ್ಣನ ಮಗನಿಗೆ ಕಲಬುರಗಿಯ ಲಿಂಗರಾಜಪ್ಪ ಅವರ ಮಗಳನ್ನು ತರುತ್ತಿದ್ದೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ.