
ಬೆಂಗಳೂರು: ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ಭೂ ಒತ್ತುವರಿ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಕೇತಗಾನಹಳ್ಳಿ ತೋಟದ ಮನೆ ಬಳಿ ಕಂದಾಯ ಇಲಾಖೆ ಅಧಿಕಾರಿಗಳು ಒತ್ತುವರಿ ತೆರವು ಕಾರ್ಯಾಚರಣೆ ನಡೆಸಿದ್ದಾರೆ. ಈಬಗ್ಗೆ ಪ್ರತಿಕ್ರಿಯಿಸಿರುವ ಹೆಚ್.ಡಿ.ಕುಮಾರಸ್ವಾಮಿ, ನಾನು ಯಾವುದೇ ಅಕ್ರಮ ನಡೆಸಿಲ್ಲ ಎಂದಿದ್ದಾರೆ.
ಕಾಂಗ್ರೆಸ್ ನವರಿಗೆ ನಾನೇ ಟಾರ್ಗೆಟ್. ನನ್ನೊಬ್ಬನನ್ನು ಟಾರ್ಗೆಟ್ ಮಾಡುವುದೇ ಅವರ ಕೆಲಸವಾಗಿದೆ. 40 ವರ್ಷಗಳ ಹಿಂದೆ ತೆಗೆದುಕೊಂಡ ಜಮೀನನ್ನು ಈಗ ರಾಜಕೀಯ ದುರುದ್ದೇಶದಿಂದ ಒತ್ತುವರಿ ಆರೋಪ ಮಾಡಿ ತೆರವು ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ನೋಟಿಸ್ ಕೂಡ ನೀಡದೇ ಈ ರೀತಿ ತೆರವು ಕಾರ್ಯಾಚಾರಣೆ ಮಾಡುತ್ತಿರುವುದು ಸರಿಯಲ್ಲ. ಈ ನಿಟ್ಟಿನಲ್ಲಿ ಕಾನೂನು ಹೋರಾಟ ಮಾಡುತ್ತೇನೆ. ನಾನು ಎರಡು ಬಾರಿ ಮುಖ್ಯಮಂತ್ರಿಯಾದವನು. ಕಾನೂನು ಬಾಹಿರ ಕೆಲಸ ಮಾಡುವ ಅಗತ್ಯ ನನಗಿಲ್ಲ. ರಾಜ್ಯ ಸರ್ಕಾರ ದಬ್ಬಾಳಿಕೆ ರಾಜಕಾರಣ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.