
ಬೀದರ್: ಬಿಸಿಲ ಝಳ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇಂತಹ ಸಂದರ್ಭಗದಳಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಕೆರೆಯಲ್ಲಿ ಯುವಕರು, ಮಕ್ಕಳು ಕೆರೆಯಲ್ಲಿ ಈಜಲು ಹೋಗುವುದು ಸಹಜ. ಹೀಗೆ ಕೆರೆಗೆ ಈಜಲು ಹೋಗಿದ್ದ ಮೂವರು ಯುವಕರು ನೀರುಪಾಲಾಗಿರುವ ಘಟನೆ ಬೀದರ್ ನಲ್ಲಿ ನಡೆದಿದೆ.
ಪ್ರಕಾಶ್ (22), ಶಿವಾಜಿ (21), ಆಕಾಶ್ ಕಂಟೆಪ್ಪ ಗುಂಗೆ (23) ಮೃತ ಯುವಕರು. ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಈ ದುರಂತ ಸಂಭವಿಸಿದೆ.
ಪ್ರಕಾಶ್ ಹಾಗೂ ಶಿವಾಜಿ ಎಂಬ ಯುವಕರು ಬೀದರ್ ನ ಚಿಟಗುಪ್ಪ ತಾಲೂಕಿನ ವಿಠಲಪುರ ಗ್ರಾಮದ ಐತಿಹಾಸಿಕ ಬಾವಿಯಲ್ಲಿ ಈಜಲು ಇಳಿದಿದ್ದಾರೆ. ಈ ವೇಳೆ ಬಾವಿಯ ಆಳದಲ್ಲಿ ಸಿಲುಕಿದ ಸ್ನೇಹಿತ ಪ್ರಕಾಶನನ್ನು ರಕ್ಷಿಸಲು ಹೋಗಿ ಶಿವಾಜಿ ಕೂಡ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ಬೆಮ್ಮಳಕೇಡಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಬೀದರ್ ನ ಹಲಸೂರು ತಾಲೂಕಿನ ಗಡಿಗೌಡಗಾಂವ್ ಗ್ರಾಮದ ಕೆರೆಯಲ್ಲಿ ಆಕಾಶ್ ಕಂಟೆಪ್ಪ ಎಂಬಾತ ಈಜಲು ಬಾರದಿದ್ದರೂ ಸ್ನೇಹಿತರ ಜೊತೆ ಈಜಲು ಕೆರೆಗೆ ತೆರಳಿದಾಗ ದುರಂತಕ್ಕೀಡಾಗಿ ಸಾವನ್ನಪ್ಪಿದ್ದಾನೆ.
ಹಲಸೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.