
ಚಿತ್ರದುರ್ಗ ನಗರದ ತುರುವನೂರು ರಸ್ತೆಯ ಖಾಸಗಿ ಹೋಟೆಲ್ ಬಳಿ ತಡರಾತ್ರಿ ತುಮಕೂರು ಜಿಲ್ಲೆ ಮಧುಗಿರಿ ಬಿಜೆಪಿ ಘಟಕದ ಅಧ್ಯಕ್ಷ ಹನುಮಂತೇಗೌಡ ಗುಂಪಾಗಿ ನಿಂತಿದ್ದರು. ಈ ವೇಳೆ ಸ್ಥಳಕ್ಕೆ ಬಂದ ಪಿಎಸ್‌ಐ ಗಾದಿಲಿಂಗಪ್ಪ ಪ್ರಶ್ನಿಸಿದ್ದಕ್ಕೆ ಮಾತಿಗೆ ಮಾತು ಬೆಳೆದು ಬಿಜೆಪಿ ನಾಯಕ ಅವಾಚ್ಯ ಪದ ಬಳಸಿದರು ಎಂಬ ಕಾರಣಕ್ಕೆ ಪಿಎಸ್‌ಐ ಕಪಾಳಕ್ಕೆ ಬಾರಿಸಿದ್ದಾರೆ ಎನ್ನಲಾಗಿದೆ.
ಇಬ್ಬರೂ ಆಸ್ಪತ್ರೆಗೆ ದಾಖಲಾಗಿದ್ದಾರೆ. ಪಿಎಸ್‌ಐ ಗಾದಿಲಿಂಗಪ್ಪ ಅವರ ಕೈ ಬೆರಳಿಗೆ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಮಧುಗಿರಿ ಬಿಜೆಪಿ ಅಧ್ಯಕ್ಷ ಹನುಮಂತೇಗೌಡ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹನುಮಂತೇಗೌಡ, ಪೊಲೀಸರಿಂದಲೇ ನನ್ನ ಮೇಲೆ ಹಲ್ಲೆ ನಡೆದಿದೆ ಎಂದು ಪ್ರತಿ ಆರೋಪ ಮಾಡಿದ್ದಾರೆ. ಆ ಬಳಿಕ ಹನುಮಂತೇಗೌಡ ಎದೆ ನೋವೆಂದು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಬಿಜೆಪಿ ಅಧ್ಯಕ್ಷ ಹನುಮಂತೇಗೌಡರ ಕಾರು ಚಾಲಕ ರಂಗಸ್ವಾಮಿ ಪ್ರಕಾರ, ಪಿಎಸ್‌ಐ ಗಾದಿಲಿಂಗಪ್ಪ ಏಕವಚನದಲ್ಲಿ ಮಾತನಾಡಿದರು. ಹನುಮಂತೇಗೌಡ, ಗೌರವಯುತವಾಗಿ ಮಾತಾಡಿ ಎಂದು ಹೇಳಿದರೂ ಅವಾಚ್ಯ ಶಬ್ದಗಳಿಂದ ನಿಂದಿಸಿದರು. ಆಗ ನೂಕಾಟ ತಳ್ಳಾಟ ನಡೆದು ಪಿಎಸ್‌ಐ ಹಲ್ಲೆ ಮಾಡಿದರು ಎಂದಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಕಾನೂನು ಸುವ್ಯವಸ್ಥೆ ಸಂಪೂರ್ಣ ನೆಲಕಚ್ಚಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಚಿತ್ರದುರ್ಗದಲ್ಲಿ ಮಧುಗಿರಿ ಬಿಜೆಪಿ ಅಧ್ಯಕ್ಷರಾದ ಹನುಮಂತೇಗೌಡ ಅವರ ಮೇಲೆ ಪಿಎಸ್‌ಐ ಗಾದಿಲಿಂಗಪ್ಪ ಹಲ್ಲೆ ನಡೆಸಿ ಗೂಂಡಾಗಿರಿ ಪ್ರದರ್ಶಿಸಿದ್ದು ಇದನ್ನು ಕರ್ನಾಟಕ ಬಿಜೆಪಿ ಅತ್ಯುಗ್ರವಾಗಿ ಖಂಡಿಸುತ್ತದೆ ಎಂದು ಹೇಳಿದ್ದಾರೆ. ರಾಜಕಾರಣಿಗಳ ಪ್ರಚೋದನೆಯಿಂದ ಈ ಘಟನೆ ನಡೆದಿದೆ ಎಂದು ಅವರು ಆರೋಪಿಸಿದ್ದಾರೆ. ಪಿಎಸ್‌ಐ ಗಾದಿಲಿಂಗಪ್ಪ ಅವರನ್ನು ತಕ್ಷಣ ಅಮಾನತು ಮಾಡದಿದ್ದರೆ ಹೋರಾಟ ಮಾಡುವುದಾಗಿ ಎಚ್ಚರಿಸಿದ್ದಾರೆ.
ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ನಿರಂತರ ಕೊಲೆ, ಸುಲಿಗೆ, ದರೋಡೆ, ಅತ್ಯಾಚಾರ ಪ್ರಕರಣಗಳು ನಿರಂತರ ಘಟಿಸುತ್ತಿವೆ. ಜನಸಾಮಾನ್ಯರಿಗೆ ಸುರಕ್ಷತೆ ಒದಗಿಸಲಾಗದ ಸ್ಥಿತಿ ನಿರ್ಮಾಣವಾಗಿದ್ದು ಕಾನೂನು ಸುವ್ಯವಸ್ಥೆ ಸಂಪೂರ್ಣ ನೆಲಕಚ್ಚಿದೆ, ಇದರ ನಡುವೆ ಕೆಲವು ಕೆಳಹಂತದ ಪೊಲೀಸ್ ಅಧಿಕಾರಿಗಳು ಸಾಮಾನ್ಯರು ಹಾಗೂ ಜವಾಬ್ದಾರಿಯುತ ನಾಗರಿಕರ… pic.twitter.com/zf5ZN3pk3J
— Vijayendra Yediyurappa (@BYVijayendra) March 15, 2025