
ಬೆಂಗಳೂರು: ಮುಸ್ಲಿಮರಿಗೆ ಗುತ್ತಿಗೆ ಕಾಮಗಾರಿಗಳಲ್ಲೂ ಮೀಸಲಾತಿ ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ.
ರಾಜ್ಯದಲ್ಲಿ ಎರಡು ಕೋಟಿ ರೂಪಾಯಿವರೆಗಿನ ಗುತ್ತಿಗೆ ಕಾಮಗಾರಿಗಳು ಹಾಗೂ ಒಂದು ಕೋಟಿ ರೂಪಾಯಿವರೆಗಿನ ಖರೀದಿ, ಸೇವೆಗಳಲ್ಲಿ ಮುಸ್ಲಿಮರಿಗೆ ಶೇಕಡ 4ರಷ್ಟು ಮೀಸಲಾತಿ ಸೇರಿದಂತೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ 1 ಮತ್ತು 2ಎ ವರ್ಗಗಳಿಗೆ ಮೀಸಲಾತಿ ಕಲ್ಪಿಸುವ ಕೆಟಿಟಿಪಿ ಕಾಯ್ದೆ 1999ರ ತಿದ್ದುಪಡಿ ವಿಧೇಯಕಕ್ಕೆ ಸಂಪುಟ ಸಭೆಯ ಅನುಮೋದನೆ ನೀಡಿದೆ.
ಈ ಮೊದಲೇ ಒಂದು ಕೋಟಿ ರೂಪಾಯಿವರೆಗಿನ ಕಾಮಗಾರಿಗಳಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ 1, 2ಎ ಮೀಸಲಾತಿ ಕಲ್ಪಿಸಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಮಾರ್ಚ್ 7 ರಂದು ಮಂಡಿಸಿದ್ದ ಬಜೆಟ್ ನಲ್ಲಿ ಒಂದು ಕೋಟಿ ರೂಪಾಯಿ ಮಿತಿಯನ್ನು ಎರಡು ಕೋಟಿ ರೂಪಾಯಿಗೆ ಹೆಚ್ಚಳ ಮಾಡಲಾಗಿದೆ. ಈ ಎಲ್ಲಾ ಪ್ರವರ್ಗಗಳಿಗೆ ಒಂದು ಕೋಟಿ ರೂಪಾಯಿವರೆಗಿನ ಖರೀದಿ ಮತ್ತು ಸೇವೆಗಳಲ್ಲಿ ಮೀಸಲಾತಿ ಕಲ್ಪಿಸಲಾಗಿದೆ. ಈ ಮೀಸಲಾತಿ ಪಟ್ಟಿಗೆ ಹೊಸದಾಗಿ ಮುಸ್ಲಿಮರನ್ನು ಸೇರಿಸಿ ಗುತ್ತಿಗೆ ಕಾಮಗಾರಿ, ಖರೀದಿ ಸೇವೆಗಳಲ್ಲಿ ಶೇ. 4ರಷ್ಟು ಮೀಸಲಾತಿ ಒದಗಿಸಲಾಗುವುದು ಎನ್ನಲಾಗಿದೆ.