
ನವದೆಹಲಿ: ತಮ್ಮ ವಿವಿಧ ಬೇಡಿಕೆಗಳ ಕುರಿತು ಭಾರತೀಯ ಬ್ಯಾಂಕ್ ಗಳ ಸಂಘ(IBA) ಜೊತೆ ನಡೆದ ಮಾತುಕತೆಯಲ್ಲಿ ಯಾವುದೇ ಫಲಿತಾಂಶ ಬಾರದ ಕಾರಣ ದೇಶಾದ್ಯಂತ ಮಾ. 24, 25ರಂದು ಬ್ಯಾಂಕ್ ಮುಷ್ಕರ ನಡೆಸುವುದು ನಿಶ್ಚಿತ ಎಂದು ಬ್ಯಾಂಕ್ ಯೂನಿಯನ್ ಸಂಯುಕ್ತ ವೇದಿಕೆ(UFBU) ತಿಳಿಸಿದೆ.
ವಾರಕ್ಕೆ ಐದು ದಿನ ಕೆಲಸ, ಎಲ್ಲಾ ಸ್ತರಳಗಳಲ್ಲಿ ಹೆಚ್ಚಿನ ಸಿಬ್ಬಂದಿ ನೇಮಕ ಸೇರಿದಂತೆ ಪ್ರಮುಖ ಬೇಡಿಕೆಗಳ ಕುರಿತು ಐಬಿಎ ಜೊತೆಗೆ ನಡೆಸಿದ ಮಾತುಕತೆ ವಿಫಲವಾಗಿದೆ ಎಂದು ಬ್ಯಾಂಕ್ ನೌಕರರ ರಾಷ್ಟ್ರೀಯ ಒಕ್ಕೂಟ(NCBE) ಪ್ರಧಾನ ಕಾರ್ಯದರ್ಶಿ ಎಲ್. ಚಂದ್ರಶೇಖರ್ ತಿಳಿಸಿದ್ದಾರೆ.
UFBU 9 ಬ್ಯಾಂಕ್ ನೌಕರರ ಸಂಘಟನೆಗಳ ಒಕ್ಕೂಟವಾಗಿದೆ. ನೌಕರರ ಕಾರ್ಯಕ್ಷಮತೆ ಪರಿಶೀಲನೆಯನ್ನು ನಿಯಮಿತವಾಗಿ ಕೈಗೊಂಡು ಅದರ ಆಧಾರದ ಮೇಲೆ ಪ್ರೋತ್ಸಾಹಕ ನೀಡುವುದಾಗಿ ಹಣಕಾಸು ಸೇವೆಗಳ ಇಲಾಖೆ ತಿಳಿಸಿದೆ. ಇದರಿಂದ ನೌಕರರ ಉದ್ಯೋಗಕ್ಕೆ ರಕ್ಷಣೆ ಇಲ್ಲದಂತಾಗಿದೆ. ಇಂತಹ ಕ್ರಮ ಕೈಬಿಡಬೇಕೆಂದು ಒತ್ತಾಯಿಸಲಾಗಿದೆ.
ಗ್ರಾಚುಟಿ ಮೊತ್ತ ಮಿತಿಯನ್ನು 25 ಲಕ್ಷ ರೂ.ಗೆ ಏರಿಸಬೇಕು. ಈ ವಿಷಯದಲ್ಲಿ ಬ್ಯಾಂಕ್ ನೌಕರರನ್ನು ಸರ್ಕಾರಿ ನೌಕರರ ಪರಿಗಣಿಸಬೇಕು. ಆದಾಯ ತೆರಿಗೆ ವಿನಾಯಿತಿ ನೀಡಬೇಕು ಎಂದು ಬೇಡಿಕೆ ಸಲ್ಲಿಸಲಾಗಿದೆ.
ಮಾ. 24, 25 ರಂದು ಬ್ಯಾಂಕ್ ಮುಷ್ಕರ ಖಚಿತವಾಗಿದ್ದು, ಬ್ಯಾಂಕುಗಳು ಸತತ ನಾಲ್ಕು ಮುಚ್ಚಲಿವೆ. ಮಾರ್ಚ್ 22 ನಾಲ್ಕನೇ ಶನಿವಾರ, ಮಾರ್ಚ್ 23 ಭಾನುವಾರ, 24 ಮತ್ತು 25ರಂದು ಮುಷ್ಕರದ ಕಾರಣ ಸತತ ನಾಲ್ಕು ದಿನ ಬ್ಯಾಂಕುಗಳು ಬಂದ್ ಆಗಲಿದ್ದು, ಗ್ರಾಹಕರು ತಮ್ಮ ಯಾವುದೇ ವ್ಯವಹಾರಗಳಿಗೆ ಸಂಬಂಧಿಸಿದಂತೆ ಮೊದಲೇ ಪ್ಲಾನ್ ಮಾಡಿಕೊಳ್ಳುವುದು ಒಳ್ಳೆಯದು.