
ಬೆಂಗಳೂರು: ಯಾವುದೇ ಸ್ಥಳೀಯ ಸಂಸ್ಥೆಯಲ್ಲಿ ಬರುವ ಸ್ಥಿರಾಸ್ತಿಗಳಿಗೆ ಅನ್ವಯಿಸುವಂತೆ ಕಡ್ಡಾಯ ಇ- ಸ್ವತ್ತು, ಇ- ಆಸ್ತಿಯ ಇ- ತಂತ್ರಾಂಶದಿಂದ ಮಾಹಿತಿ ಪಡೆದು ಎ ಖಾತಾ ಅಥವಾ ಬಿ ಖಾತಾ ಯಾವುದೇ ಇದ್ದರೂ ನೋಂದಾಯಿಸಬೇಕು ಎಂದು ನೋಂದಣಿ ಪರಿವೀಕ್ಷಕರು ಮತ್ತು ಮುದ್ರಾಂಕ ಇಲಾಖೆ ಆಯುಕ್ತರಾದ ದಯಾನಂದ್ ಸುತ್ತೋಲೆ ಹೊರಡಿಸಿದ್ದಾರೆ.
ಇ- ತಂತ್ರಾಂಶದಡಿ ಇ- ಖಾತಾ ಹೊಂದಿರುವ ಎ ಖಾತಾ, ಬಿ ಖಾತಾ ಆಸ್ತಿಗಳ ನೋಂದಣಿಗೆ ಕೆಲವು ಉಪ ನೋಂದಣಾಧಿಕಾರಿಗಳು ಗೊಂದಲ ಸೃಷ್ಟಿಸುತ್ತಿದ್ದರು. ಎ ಖಾತಾ ಆಸ್ತಿಯಾಗಿರಲಿ, ಬಿ ಖಾತಾ ಆಸ್ತಿಯಾಗಿರಲಿ ಇ- ಆಸ್ತಿ ಅಥವಾ ಇ- ಸ್ವತ್ತಿನ ಇ- ತಂತ್ರಾಂಶದಲ್ಲಿ ನೋಂದಣಿಯಾಗಿ ಇ- ಖಾತಾ ಪಡೆದುಕೊಂಡಿದ್ದರೆ ನೋಂದಣಿ ಮಾಡಬೇಕು ಎಂದು ಸೂಚನೆ ನೀಡಿದ್ದಾರೆ.
ರಾಜ್ಯದ ಎಲ್ಲಾ ಪಾಲಿಕೆ, ನಗರ ಸಭೆ, ಪುರಸಭೆ, ಗ್ರಾಪಂ ಅಧೀನದಲ್ಲಿರುವ ಸ್ವತ್ತುಗಳಿಗೆ ಕಡ್ಡಾಯವಾಗಿ ಇ- ಸ್ವತ್ತು, ಇ-ಆಸ್ತಿ ಬಳಸಿ ನೋಂದಣಿ ಪ್ರಕ್ರಿಯೆ ನಡೆಸಲು ಸೂಚಿಸಲಾಗಿದೆ. ಹೀಗಿದ್ದರೂ ಕೆಲವು ಉಪ ನೋಂದಣಾಧಿಕಾರಿಗಳು ತಪ್ಪಾಗಿ ಅರ್ಥೈಸಿಕೊಂಡು ಗೊಂದಲ ಸೃಷ್ಟಿಸುತ್ತಿರುವ ಹಿನ್ನೆಲೆಯಲ್ಲಿ ಸೂಚನೆ ನೀಡಲಾಗಿದೆ.
ಉಪ ನೋಂದಣಾಧಿಕಾರಿಗಳು ತಮ್ಮ ವ್ಯಾಪ್ತಿಯ ಸ್ಥಿರಾಸ್ತಿಗಳಿಗೆ ಕಡ್ಡಾಯವಾಗಿ ಇ- ತಂತ್ರಾಂಶದಿಂದ ನಿಶ್ಚಿತವಾದ ಇ- ಸ್ವತ್ತು ಹಾಗೂ ಇ- ಆಸ್ತಿಯನ್ನು ಇ- ತಂತ್ರಾಂಶದಿಂದ ಮಾಹಿತಿ ಪಡೆದು ಎ ಖಾತಾ ಅಥವಾ ಬಿ ಖಾತಾ ಯಾವುದೇ ಇದ್ದರೂ ನೋಂದಣಿ ಮಾಡಲು ಸೂಚಿಸಲಾಗಿದೆ.