
ಹಾಸನ: ಹಾಸನ ಜಿಲ್ಲೆಯ ಆಲೂರು ತಾಲೂಕಿನ ಹಳ್ಳಿಯೂರು ಗ್ರಾಮದಲ್ಲಿ ಸಾಲ ವಸೂಲಿಗೆ ಬಂದ ಮೈಕ್ರೋಫೈನಾನ್ಸ್ ಸಿಬ್ಬಂದಿ ಮನೆ ಬಾಗಿಲಲ್ಲಿ ಕುಳಿತಿದ್ದರಿಂದ ಮನನೊಂದ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕೆಂಚಮ್ಮ(50) ಆತ್ಮಹತ್ಯೆ ಮಾಡಿಕೊಂಡವರು. ಬಿಎಸ್ಎಸ್, ಇಐಎಫ್ ಫೈನಾನ್ಸ್ ಕಂಪನಿಯಿಂದ ಕೆಂಚಮ್ಮ ಎರಡು ಲಕ್ಷ ರೂ. ಸಾಲ ಪಡೆದುಕೊಂಡಿದ್ದು, ಪ್ರತಿ ತಿಂಗಳು ಸಾಲದ ಕಂತು ಪಾವತಿಸುತ್ತಿದ್ದರು. ಈ ತಿಂಗಳು ಹಣವಿಲ್ಲದ ಕಾರಣ ಕಂತು ಕಟ್ಟಿರಲಿಲ್ಲ. ಇವತ್ತೇ ಹಣ ಕಟ್ಟಬೇಕೆಂದು ಬಿಎಸ್ಎಸ್ ಮೈಕ್ರೋ ಫೈನಾನ್ಸ್ ಸಿಬ್ಬಂದಿ ಮನೆ ಬಳಿ ಬಂದು ಕುಳಿತಿದ್ದಾರೆ.
ಇದರಿಂದ ಮನನೊಂದ ಕೆಂಚಮ್ಮ ಮನೆಯಲ್ಲೇ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾವಿನ ಸುದ್ದಿ ತಿಳಿದ ಮೈಕ್ರೋಫೈನಾನ್ಸ್ ಸಿಬ್ಬಂದಿ ಸ್ಥಳದಿಂದ ಪರಾರಿಯಾಗಿದ್ದಾರೆ. ಸ್ಥಳಕ್ಕೆ ಆಲೂರು ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತನಿಖೆ ಕೈಗೊಂಡಿದ್ದಾರೆ.