
ಬೀದರ್: ಬೀದರ್ ನಗರದ ಸಣ್ಣ ನೀರಾವರಿ ಇಲಾಖೆಯ ಸೂಪರಿಂಟೆಂಡೆಂಟ್ ಕುಂದನಬಾಯಿ ಅವರ ಮಕ್ಕಳು ಮತ್ತು ಸಂಬಂಧಿಕರು ಎಫ್.ಡಿ.ಎ. ಸಂಜು ಡಾಕುಳಗಿ ಮೇಲೆ ಹಲ್ಲೆ ನಡೆಸಿದ್ದು, ಗಂಭೀರವಾಗಿ ಗಾಯಗೊಂಡಿರುವ ಅವರನ್ನು ಬ್ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸಂಜು ಸೋಮವಾರ ಕಚೇರಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ವೇಳೆ ಕುಂದನಬಾಯಿ ಅವರ ಮಕ್ಕಳು, ಸಂಬಂಧಿಕರು ಸೇರಿ 15 ಜನ ಕಲ್ಲು, ಬಡಿಗೆ, ರಾಡ್ ನಿಂದ ಸಂಜು ಮೇಲೆ ಹಲ್ಲೆ ನಡೆಸಿದ್ದು, ಗಂಭೀರವಾಗಿ ಗಾಯಗೊಂಡು ಪ್ರಜ್ಞೆ ತಪ್ಪಿ ಬಿದ್ದಿದ್ದ ಅವರನ್ನು ಬ್ರಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.
ಎಫ್‌ಡಿಎ ಹುದ್ದೆಯಿಂದ ಸೂಪರಿಂಟೆಂಡೆಂಟ್ ಹುದ್ದೆಗೆ ಬಡ್ತಿ ಪಡೆದಿರುವ ಸಂಜು ಆ ಸ್ಥಾನ ಬಿಟ್ಟು ಕೊಡುವಂತೆ ಕುಂದನಬಾಯಿ ಅವರಿಗೆ ಕೇಳಿದ್ದು, ಇದರಿಂದ ಆಕ್ರೋಶಗೊಂಡ ಅವರು ಮಕ್ಕಳು, ಸಂಬಂಧಿಕರ ಮೂಲಕ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ಆದರೆ, ಇದನ್ನು ಒಪ್ಪದ ಕುಂದನಬಾಯಿ ಅಲ್ಲಗಳೆದಿದ್ದಾರೆ. ಸಂಜು ಬಡ್ತಿ ಪಡೆದಿದ್ದರೆ ಸರ್ಕಾರಿ ಆದೇಶ ಪತ್ರ ತರಬೇಕು. ಯಾವುದೇ ಆದೇಶ ಪತ್ರವಿಲ್ಲದೆ ಕುರ್ಚಿ ಬಿಟ್ಟುಕೊಡಲು ಕೇಳುತ್ತಿದ್ದು, ಅನಗತ್ಯವಾಗಿ ಕಿರಿಕಿರಿ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.