
ಬೆಂಗಳೂರು: ಬಿಗ್ ಬಾಸ್ಕೆಟ್, ಅಮೆಜಾನ್, ಡಿ ಮಾರ್ಟ್ ಸೇರಿದಂತೆ ಎಲ್ಲಾ ಇ-ಕಾಮರ್ಸ್ ಫ್ಲಾಟ್ ಫಾರಂ ವೇದಿಕೆಗಳನ್ನು ಎಪಿಎಂಸಿ ನಿಯಂತ್ರಣಕ್ಕೆ ತರಲಾಗುವುದು.
ರಾಜ್ಯ ಸರ್ಕಾರ ರೂಪಿಸಿದ ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ(ನಿಯಂತ್ರಣ ಮತ್ತು ಅಭಿವೃದ್ಧಿ) ತಿದ್ದುಪಡಿ ವಿಧೇಯಕಕ್ಕೆ ಸೋಮವಾರ ಅನುಮೋದನೆ ದೊರೆತಿದೆ.
ಯಾವುದೇ ಇ- ಫ್ಲ್ಯಾಟ್ ಫಾರ್ಮ್ ಗಳು ಇನ್ನು ಮುಂದೆ ಎಪಿಎಂಸಿಗಳಿಗೆ ಸೆಸ್ ಸಂದಾಯ ಮಾಡುವುದು ಕಡ್ಡಾಯವಾಗಿದೆ. ಕ್ರಮ ಕೈಗೊಳ್ಳುವ ಅಧಿಕಾರವನ್ನು ಕೃಷಿ ಮಾರುಕಟ್ಟೆ ನಿರ್ದೇಶಕರಿಗೆ ನೀಡಲಾಗಿದೆ.
ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ್ ಈ ಬಗ್ಗೆ ಮಾಹಿತಿ ನೀಡಿದ್ದು, ಕೃಷಿ ಮಾರುಕಟ್ಟೆ ನಿರ್ದೇಶಕರು ನೀಡುವ ಯಾವುದೇ ತೀರ್ಪಿನ ಬಗ್ಗೆ ಅಸಮಾಧಾನವಿದ್ದಲ್ಲಿ ಆದೇಶ ಸ್ವೀಕರಿಸಿದ 30 ದಿನದೊಳಗೆ ಕರ್ನಾಟಕ ಅಪೀಲು ನ್ಯಾಯಾಧಿಕರಣಕ್ಕೆ ಮೇಲ್ಮನವಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಸೋಮವಾರ ವಿಧಾನಸಭೆಯಲ್ಲಿ ವಿಧೇಯಕ ಅಂಗೀಕಾರಕ್ಕೆ ಮನವಿ ಮಾಡಿದ ಸಚಿವರು ತಿಳಿಸಿದ್ದಾರೆ.
ಈ ತಿದ್ದುಪಡಿಯಿಂದ ಎಪಿಎಂಸಿ ಅಥವಾ ರೈತರನ್ನು ವಂಚಿಸಲು ಸಾಧ್ಯವಿಲ್ಲ. ಕಂಪನಿಯೊಂದು ಸೆಸ್ ವಂಚನೆ ಮಾಡಿದ್ದರಿಂದ ದೊಡ್ಡ ಮೊತ್ತದ ದಂಡ ವಸೂಲು ಮಾಡಲಾಗಿದೆ. ಲೈಸೆನ್ಸ್ ಪಡೆಯದ ಹೊರತು ಅಧಿಸೂಚಿತ ಕೃಷಿ ಉತ್ಪನ್ನದ ವ್ಯಾಪಾರಕ್ಕಾಗಿ ಇ- ವಾಣಿಜ್ಯ ವೇದಿಕೆ ಸ್ಥಾಪನೆ ಮಾಡುವಂತಿಲ್ಲ ಎಂದು ಸಚಿವರು ಹೇಳಿದ್ದಾರೆ.