BUDGET BREAKING: ಆಟಿಸಂ, ಬೌದ್ಧಿಕ ವಿಕಲತೆ ಮತ್ತು ಬಹುವಿಧ ಅಂಗವಿಕಲತೆ ಮಕ್ಕಳ ಆರೈಕೆದಾರರಿಗೆ ಪ್ರೋತ್ಸಾಹ ಧನ ಘೋಷಣೆ

ಬೆಂಗಳೂರು: ಸಿಎಂ ಸಿದ್ದರಾಮಯ್ಯ, ಆಟಿಸಂ, ಬೌದ್ಧಿಕ ವಿಕಲತೆ ಮತ್ತು ಬಹುವಿಧ ಅಂಗವಿಕಲತೆ ಮಕ್ಕಳಿಗೂ ಪ್ರೋತ್ಸಾಹ ಧನ ನೀಡುವುದಗೈ ಬಜೆಟ್ ನಲ್ಲಿ ಘೋಷಣೆ ಮಾಡಿದ್ದಾರೆ.

ವಿಕಲಚೇತನರ ಸಾಮಾಜಿಕ, ಆರ್ಥಿಕ ಸ್ಥಿತಿಗತಿ ಕುರಿತಂತೆ ನಿಖರ ಮಾಹಿತಿ ಸಂಗ್ರಹಿಸಲು ಹಾಗೂ ಅವರಿಗೆ ಸೂಕ್ತ ಸೌಲಭ್ಯ ಒದಗಿಸುವ ಹಿತದೃಷ್ಟಿಯಿಂದ ವಿಕಲಚೇತನರ ಸಮೀಕ್ಷೆ ನಡೆಸಲಾಗುವುದು ಎಂದರು.

ಮೈಸೂರು ಮತ್ತು ಬೆಳಗಾವಿಯಲ್ಲಿರುವ ವಿಶೇಷ ಮಕ್ಕಳ ಸರ್ಕಾರಿ ವಸತಿಯುತ ಶಾಲೆಗಳನ್ನು ಉನ್ನತೀಕರಿಸಲು ಐದು ಕೋಟಿ ರೂ. ನೀಡಲಾಗುವುದು. ಇವುಗಳ ನಿರ್ವಹಣೆಯನ್ನು ಸ್ವಯಂ ಸೇವಾ ಸಂಸ್ಥೆಗಳ ಸಹಕಾರದೊಂದಿಗೆ ಕೈಗೊಳ್ಳಲಾಗುವುದು.

Cerebral Palsy, Muscular Dystrophy, Parkinsons ಮತ್ತು Multiple Sclerosis ಕಾಯಿಲೆಗಳಿಂದ ಬಳಲುತ್ತಿರುವ ವ್ಯಕ್ತಿಗಳ ಆರೈಕೆದಾರರಿಗೆ ನೀಡುತ್ತಿರುವ ಮಾಸಿಕ 1,000 ರೂ. ಪ್ರೋತ್ಸಾಹಧನ ಯೋಜನೆಯನ್ನು ಆಟಿಸಂ, ಬೌದ್ಧಿಕ ವಿಕಲತೆ ಮತ್ತು ಬಹುವಿಧ ಅಂಗವಿಕಲತೆ (ಶ್ರವಣ ಮತ್ತು ದೃಷ್ಟಿ ನ್ಯೂನ್ಯತೆ) ಕಾಯಿಲೆಗಳಿಂದ ಬಳಲುತ್ತಿರುವ ಆರೈಕೆದಾರರಿಗೂ ವಿಸ್ತರಿಸಲಾಗುವುದು.

ಬಳ್ಳಾರಿಯ ಸರ್ಕಾರಿ ಶ್ರವಣದೋಷವುಳ್ಳ ಮಕ್ಕಳ ಶಾಲೆ ಹಾಗೂ ಹುಬ್ಬಳ್ಳಿಯ ದೃಷ್ಟಿದೋಷವುಳ್ಳ ಮಕ್ಕಳ ಶಾಲೆಗಳನ್ನು ಪ್ರಾಥಮಿಕ ಶಾಲಾ ಹಂತದಿಂದ ಪ್ರೌಢಶಾಲಾ ಹಂತಕ್ಕೆ ಮೇಲ್ದರ್ಜೆಗೇರಿಸಲಾಗುವುದು.

ವಿಶೇಷ ಪಾಲನಾ ಯೋಜನೆಯಡಿ ಹೆಚ್‌.ಐ.ವಿ. ಸೋಂಕಿತ ಮತ್ತು ಬಾಧಿತ ಮಕ್ಕಳ ಪೌಷ್ಟಿಕ ಆಹಾರ ಮತ್ತು ಶಿಕ್ಷಣವನ್ನು ಪ್ರೋತ್ಸಾಹಿಸಲು ಪ್ರಸ್ತುತ ನೀಡಲಾಗುತ್ತಿರುವ ಮಾಸಿಕ ಧನಸಹಾಯವನ್ನು 1,000 ರೂ.ನಿಂದ 2,000 ರೂ.ಗೆ ಹೆಚ್ಚಿಸಲಾಗುವುದು.

ರಾಜ್ಯ ಅನುದಾನದಡಿಯಲ್ಲಿ ನಡೆಯುತ್ತಿರುವ ವಸತಿಯುತ ವಿಶೇಷ ಶಾಲೆಗಳ ಮಕ್ಕಳ ಪಥ್ಯಾಹಾರ ಭತ್ಯೆಯನ್ನು ಮಾಸಿಕ 1,750 ರೂ.ಗಳಿಗೆ ಹೆಚ್ಚಿಸಲಾಗುವುದು.

ಮಹಿಳಾ ಉದ್ದೇಶಿತ ಕಾರ್ಯಕ್ರಮಗಳಿಗಾಗಿ 2025-26ನೇ ಸಾಲಿನಲ್ಲಿ ಒಟ್ಟಾರೆಯಾಗಿ 94,084 ಕೋಟಿ ರೂ. ಒದಗಿಸಲಾಗುವುದು. ಮಕ್ಕಳ ಉದ್ದೇಶಿತ ಕಾರ್ಯಕ್ರಮಗಳಿಗಾಗಿ 2025-26ನೇ ಸಾಲಿನಲ್ಲಿ ಒಟ್ಟಾರೆಯಾಗಿ 62,033 ಕೋಟಿ ರೂ. ಒದಗಿಸಲಾಗುವುದು ಎಂದು ತಿಳಿಸಿದರು.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read