ಬೆಂಗಳೂರು: ಪ್ರಸಕ್ತ ಸಾಲಿನ ಬಜೆಟ್ ನಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಬರಪೂರ ಅನುದಾನಗಳನ್ನು ಸಿಎಂ ಸಿದ್ದರಾಮಯ್ಯ ಘೋಷಿಸಿದ್ದಾರೆ.
ಗೃಹಲಕ್ಷ್ಮಿ ಯೋಜನೆಯನ್ನು 2023-24ನೇ ಸಾಲಿನಿಂದ ಜಾರಿಗೊಳಿಸಲಾಗಿದೆ. 2024-25ನೇ ಸಾಲಿನಲ್ಲಿ 1.22 ಕೋಟಿ ಕುಟುಂಬಗಳ ಯಜಮಾನಿಯರಿಗೆ ಧನಸಹಾಯ ಒದಗಿಸಲಾಗಿತ್ತು. ಪ್ರಸಕ್ತ ವರ್ಷದಲ್ಲಿ ಈ ಯೋಜನೆಗೆ 28,608 ಕೋಟಿ ರೂ. ಒದಗಿಸಲಾಗಿದೆ.
ರಾಜ್ಯದ 37 ಲಕ್ಷ ಮಕ್ಕಳ ಆರೈಕೆ ಮತ್ತು ಕಲಿಕೆಯಲ್ಲಿ ಮಹತ್ತರ ಪಾತ್ರ ವಹಿಸುತ್ತಿರುವ ಅಂಗನವಾಡಿ ಕಾರ್ಯಕರ್ತೆಯರ ಗೌರವಧನವನ್ನು 1,000 ರೂ. ಹಾಗೂ ಸಹಾಯಕಿಯರ ಗೌರವಧನವನ್ನು 750 ರೂ. ಹೆಚ್ಚಿಸಲಾಗುವುದು.
ಸಕ್ಷಮ ಅಂಗನವಾಡಿ ಯೋಜನೆಯಡಿ ರಾಜ್ಯದ 17,454 ಅಂಗನವಾಡಿ ಕೇಂದ್ರಗಳಿಗೆ ಹೆಚ್ಚುವರಿ ಸೌಲಭ್ಯಗಳನ್ನು ಕಲ್ಪಿಸಲು ತಲಾ ಒಂದು ಲಕ್ಷ ರೂ. ನಂತೆ ಒಟ್ಟು 175 ಕೋಟಿ ರೂ. ಒದಗಿಸಲಾಗುವುದು.
ಅಂಗನವಾಡಿ ಕಟ್ಟಡಗಳ ನಿರ್ಮಾಣಕ್ಕಾಗಿ ನಗರಸಭೆ/ ಪುರಸಭೆಗಳಲ್ಲಿ ಲಭ್ಯವಿರುವ 173 ಸಿ.ಎ ನಿವೇಶನಗಳನ್ನು ನಗರಾಭಿವೃದ್ಧಿ ಇಲಾಖೆಯಿಂದ ಶೇ.50 ರಷ್ಟು ರಿಯಾಯಿತಿ ದರದಲ್ಲಿ ಖರೀದಿಸಲು 10 ಕೋಟಿ ರೂ. ಮೀಸಲಿರಿಸಲಾಗಿದೆ.
ವಿಕಲಚೇತನರ ಸಾಮಾಜಿಕ, ಆರ್ಥಿಕ ಸ್ಥಿತಿಗತಿ ಕುರಿತಂತೆ ನಿಖರ ಮಾಹಿತಿ ಸಂಗ್ರಹಿಸಲು ಹಾಗೂ ಅವರಿಗೆ ಸೂಕ್ತ ಸೌಲಭ್ಯ ಒದಗಿಸುವ ಹಿತದೃಷ್ಟಿಯಿಂದ ವಿಕಲಚೇತನರ ಸಮೀಕ್ಷೆ ನಡೆಸಲಾಗುವುದು.
ಮೈಸೂರು ಮತ್ತು ಬೆಳಗಾವಿಯಲ್ಲಿರುವ ವಿಶೇಷ ಮಕ್ಕಳ ಸರ್ಕಾರಿ ವಸತಿಯುತ ಶಾಲೆಗಳನ್ನು ಉನ್ನತೀಕರಿಸಲು ಐದು ಕೋಟಿ ರೂ. ನೀಡಲಾಗುವುದು. ಇವುಗಳ ನಿರ್ವಹಣೆಯನ್ನು ಸ್ವಯಂ ಸೇವಾ ಸಂಸ್ಥೆಗಳ ಸಹಕಾರದೊಂದಿಗೆ ಕೈಗೊಳ್ಳಲಾಗುವುದು.
Cerebral Palsy, Muscular Dystrophy, Parkinsons ಮತ್ತು Multiple Sclerosis ಕಾಯಿಲೆಗಳಿಂದ ಬಳಲುತ್ತಿರುವ ವ್ಯಕ್ತಿಗಳ ಆರೈಕೆದಾರರಿಗೆ ನೀಡುತ್ತಿರುವ ಮಾಸಿಕ 1,000 ರೂ. ಪ್ರೋತ್ಸಾಹಧನ ಯೋಜನೆಯನ್ನು ಆಟಿಸಂ, ಬೌದ್ಧಿಕ ವಿಕಲತೆ ಮತ್ತು ಬಹುವಿಧ ಅಂಗವಿಕಲತೆ (ಶ್ರವಣ ಮತ್ತು ದೃಷ್ಟಿ ನ್ಯೂನ್ಯತೆ) ಕಾಯಿಲೆಗಳಿಂದ ಬಳಲುತ್ತಿರುವ ಆರೈಕೆದಾರರಿಗೂ ವಿಸ್ತರಿಸಲಾಗುವುದು.
ಬಳ್ಳಾರಿಯ ಸರ್ಕಾರಿ ಶ್ರವಣದೋಷವುಳ್ಳ ಮಕ್ಕಳ ಶಾಲೆ ಹಾಗೂ ಹುಬ್ಬಳ್ಳಿಯ ದೃಷ್ಟಿದೋಷವುಳ್ಳ ಮಕ್ಕಳ ಶಾಲೆಗಳನ್ನು ಪ್ರಾಥಮಿಕ ಶಾಲಾ ಹಂತದಿಂದ ಪ್ರೌಢಶಾಲಾ ಹಂತಕ್ಕೆ ಮೇಲ್ದರ್ಜೆಗೇರಿಸಲಾಗುವುದು.
ವಿಶೇಷ ಪಾಲನಾ ಯೋಜನೆಯಡಿ ಹೆಚ್.ಐ.ವಿ. ಸೋಂಕಿತ ಮತ್ತು ಬಾಧಿತ ಮಕ್ಕಳ ಪೌಷ್ಟಿಕ ಆಹಾರ ಮತ್ತು ಶಿಕ್ಷಣವನ್ನು ಪ್ರೋತ್ಸಾಹಿಸಲು ಪ್ರಸ್ತುತ ನೀಡಲಾಗುತ್ತಿರುವ ಮಾಸಿಕ ಧನಸಹಾಯವನ್ನು 1,000 ರೂ.ನಿಂದ 2,000 ರೂ.ಗೆ ಹೆಚ್ಚಿಸಲಾಗುವುದು.
ರಾಜ್ಯ ಅನುದಾನದಡಿಯಲ್ಲಿ ನಡೆಯುತ್ತಿರುವ ವಸತಿಯುತ ವಿಶೇಷ ಶಾಲೆಗಳ ಮಕ್ಕಳ ಪಥ್ಯಾಹಾರ ಭತ್ಯೆಯನ್ನು ಮಾಸಿಕ 1,750 ರೂ.ಗಳಿಗೆ ಹೆಚ್ಚಿಸಲಾಗುವುದು.
ಮಹಿಳಾ ಉದ್ದೇಶಿತ ಕಾರ್ಯಕ್ರಮಗಳಿಗಾಗಿ 2025-26ನೇ ಸಾಲಿನಲ್ಲಿ ಒಟ್ಟಾರೆಯಾಗಿ 94,084 ಕೋಟಿ ರೂ. ಒದಗಿಸಲಾಗುವುದು.
ಮಕ್ಕಳ ಉದ್ದೇಶಿತ ಕಾರ್ಯಕ್ರಮಗಳಿಗಾಗಿ 2025-26ನೇ ಸಾಲಿನಲ್ಲಿ ಒಟ್ಟಾರೆಯಾಗಿ 62,033 ಕೋಟಿ ರೂ. ಒದಗಿಸಲಾಗುವುದು.
ಆಶಾ ಕಾರ್ಯಕರ್ತೆಯರಿಗೆ ತಂಡ ಆಧಾರಿತ ಪ್ರೋತ್ಸಾಹಧನ ನೀಡುವುದರ ಮೂಲಕ ಗೌರವಧನವನ್ನು 1,000 ರೂ. ಹೆಚ್ಚಿಸಲಾಗುವುದು.
ಆಹಾರದ ಗುಣಮಟ್ಟ ಮತ್ತು ಸುರಕ್ಷತೆಯನ್ನು ದೃಢಪಡಿಸಲು ಸಂಚಾರಿ ಆಹಾರ ಪ್ರಯೋಗಾಲಯಗಳ ಮೂಲಕ ಆಹಾರ ಮಾದರಿಗಳನ್ನು ವಿಶ್ಲೇಷಿಸಿ, ಅಸುರಕ್ಷಿತ ಮತ್ತು ಕಳಪೆ ಆಹಾರವನ್ನು ಗುರುತಿಸಿ ಕಾನೂನಿನ ಅನುಸಾರ ಕ್ರಮಕೈಗೊಳ್ಳಲಾಗುತ್ತಿದೆ.
ಸಾರ್ವಜನಿಕ ಆರೋಗ್ಯ ಸಂಸ್ಥೆಗಳಲ್ಲಿ ಗುಣಮಟ್ಟದ ಔಷಧಗಳನ್ನು ವಿತರಿಸಲು KSMSCL ಸಂಸ್ಥೆಯನ್ನು ಬಲಪಡಿಸಲಾಗುವುದು. ವೈದ್ಯಕೀಯ ಉಪಕರಣಗಳ ಮೇಲ್ವಿಚಾರಣೆ ಮತ್ತು ನಿರ್ವಹಣೆಗಾಗಿ ತಂತ್ರಾಂಶವನ್ನು ಪರಿಚಯಿಸಲಾಗುವುದು.
ಸುಟ್ಟ ಗಾಯಗಳ ತಡೆಗಟ್ಟುವಿಕೆ ಹಾಗೂ ಸಂತ್ರಸ್ತರ ಚಿಕಿತ್ಸೆಗೆ ಸಂಬಂಧಿಸಿದಂತೆ, ಸುಟ್ಟ ಗಾಯಗಳ ಚಿಕಿತ್ಸಾ ನೀತಿಯನ್ನು ರಾಷ್ಟ್ರದಲ್ಲಿಯೇ ಪ್ರಪ್ರಥಮವಾಗಿ ರಾಜ್ಯದಲ್ಲಿ ಜಾರಿಗೆ ತರಲಾಗುವುದು.
ಆರೋಗ್ಯ ಇಲಾಖೆಯಲ್ಲಿ ಈ ಕೆಳಕಂಡ ಸುಧಾರಣಾ ಕ್ರಮಗಳನ್ನು ಪ್ರಸಕ್ತ ಸಾಲಿನಲ್ಲಿ ತೆಗೆದುಕೊಳ್ಳಲಾಗುವುದು:
i) ಕೆ.ಪಿ.ಎಂ.ಇ ಕಾಯ್ದೆಯಡಿ ನೀಡಲಾಗುವ ಮಾನ್ಯತೆ ಪ್ರಮಾಣ ಪತ್ರವನ್ನು (Accreditation Certificate) 30 ದಿನದ ಕಾಲಮಿತಿಯೊಳಗೆ ಒದಗಿಸಲಾಗುವುದು.
ii) ಮೊಬೈಲ್ ತಂತ್ರಾಂಶದ ಮೂಲಕ ಹಾಜರಾತಿ ನೀಡುವ ವ್ಯವಸ್ಥೆಯನ್ನು ಜಾರಿಗೆ ತರಲಾಗುವುದು. ವರ್ಗಾವಣೆ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಎಲ್ಲಾ ಅಧಿಕಾರಿ ಸಿಬ್ಬಂದಿ ವರ್ಗದವರಿಗೂ ಪಾರದರ್ಶಕವಾದ ವರ್ಗಾವಣೆ ನೀತಿಯನ್ನು ರೂಪಿಸಲಾಗುವುದು.
iii) ರಾಜ್ಯದಲ್ಲಿನ ತಾಲ್ಲೂಕು ಆಸ್ಪತ್ರೆಗಳ ಆಡಳಿತವನ್ನು ಜಿಲ್ಲಾ ಶಸ್ತ್ರಚಿಕಿತ್ಸಕರ ವ್ಯಾಪ್ತಿಗೆ ಒಳಪಡಿಸಲಾಗುವುದು.
iv) ಇಲಾಖೆಯಲ್ಲಿ ಖಾಲಿಯಿರುವ Critical Vacancy ಹುದ್ದೆಗಳನ್ನು ತರ್ಕಬದ್ಧಗೊಳಿಸಿ (Rationalize) ಆದ್ಯತೆಯ ಮೇಲೆ ಭರ್ತಿ ಮಾಡಲು ಕ್ರಮ ಕೈಗೊಳ್ಳಲಾಗುವುದು.